
ಹುಕ್ಕೇರಿ: ‘ವಲಸೆ ಕುರಿಗಾಹಿಗಳು ಕುರಿಕಾಯುವ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬಾರದು. ಎಲ್ಲೇ ಹೋದರೂ ಅವರ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಮೀಸಲಾತಿ ಇದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಪ್ರಬುದ್ಧ ನಾಗರಿಕರನ್ನಾಗಿ ಮಾಡಿ’ ಎಂದು ಶಾಸಕ ನಿಖಿಲ್ ಕತ್ತಿ ಸಲಹೆ ನೀಡಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ, ತಾಲ್ಲೂಕಿಗೆ ಮಂಜೂರಾದ 100 ‘ಕುರುಗಾಹಿಗಳ ಗುರುತಿನ ಪತ್ರ’ಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.
‘ಸುಲ್ತಾನಪುರ ಸಂಗಮ ಬ್ಯಾರೇಜಿನಿಂದ ತಾಲ್ಲೂಕಿನ 19 ಕೆರೆಗಳಿಗೆ ಹಿರಣ್ಯಕೇಶಿ ನದಿ ನೀರನ್ನು ಹರಿಸುವ ಯೋಜನೆಯನ್ನು ಜನವರಿಯಲ್ಲಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಶಾಸಕರು ಹೇಳಿದರು.
ಪೂರ್ವಭಾವಿ ಸಭೆ: ಹುಕ್ಕೇರಿ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ನಡೆಯವ ಲಕ್ಷ್ಮೀದೇವಿ ಜಾತ್ರೆ ಅಂಗವಾಗಿ ಜಾತ್ರಾ ಕಮಿಟಿ ಹಾಗೂ ಹಕ್ಕುದಾರರ, ಪುರಸಭೆ ಮಾಜಿ ಸದಸ್ಯರ ಮತ್ತು ಅಧಿಕಾರಿಗಳ ಜತೆ ಪೂರ್ವ ಭಾವಿ ಸಭೆ ನಡೆಸಿದ ಶಾಸಕರು, ‘ಒಳಚರಂಡಿ ಹಾಗೂ ಕುಡಿಯುವ ನೀರಿಗಾಗಿ ಅಗೆದಿರುವ ರಸ್ತೆಗಳ ಕಾಮಗಾರಿ ಜನವರಿ 15ರ ಒಳಗೆ ಸಂಪೂರ್ಣ ಮುಗಿಯಬೇಕು. ಇಲ್ಲದಿದ್ದರೆ ಬೇರೆ ಏಜನ್ಸಿ ಮೂಲಕ ಮಾಡಿಸಲಾಗುವುದು. ಅದರ ವೆಚ್ಚವನ್ನು ಈಗಿರುವ ಕಂಪನಿ ಕೊಡಬೇಕಾಗುತ್ತದೆ’ ಎಂದು ಹೇಳಿದರು.
ರಸ್ತೆ ಸುಧಾರಣೆ, ವಿದ್ಯುತ್ ತಂತಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಜಾತ್ರಾ ಸಮಿತಿಯವರು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಪಿಡಬ್ಲೂಡಿ ಎಇಇ ಪ್ರವೀಣ ಮಾಡ್ಯಾಳ, ಎಇ ಸಂತೋಷ ಪಾಟೀಲ, ಜೆಇ ರಾಜಶೇಖರ ಪಟ್ಟಣಶೆಟ್ಟಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಸತ್ಯಪ್ಪ ನಾಯಿಕ, ಮಹಾಲಿಂಗ ಸನದಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ರಾಚಯ್ಯಾ ಹಿರೇಮಠ, ಗುರುರಾಜ ಕುಲಕರ್ಣಿ, ಯಾದಗೂಡದ ಶಿವನಗೌಡ ಪಾಟೀಲ, ಮುಖಂಡರಾದ ಅಣ್ಣಾಗೌಡ ಪಾಟೀಲ, ರಾಜು ಮುನ್ನೋಳಿ, ಮಹಾಂತೇಶ ತಳವಾರ, ಆನಂದ ಗಂಧ, ಸಿದ್ದಪ್ಪ ಹಳಿಜೋಳ, ಗಿರೀಶ ಕುಲಕರ್ಣಿ, ಬಿ.ಎಸ್. ಪಾಟೀಲ, ಪಿಂಟು ಶೆಟ್ಟಿ, ರಾಜು ಚೌಗಲಾ, ಚನ್ನಪ್ಪ ಗಜಬರ, ರವಿ ಬಸ್ತವಾಡಿ, ಬಸವರಾಜ ನಂದಿಕೊಲಮಠ, ಸುನೀಲ ಬೈರಣ್ಣವರ, ಬಸವರಾಜ ನಾಯಿಕ ಇದ್ದರು.
ಬೇರೆ ಜಿಲ್ಲೆಗೆ ಹೋದಾಗ ಕುರಿಗಾಹಿಗಳ ಗುರುತು ಹಿಡಿಯಲು ಆಸ್ಪತ್ರೆಗೆ ತೋರಿಸಲು ಅಥವಾ ಬೇರಾವುದೇ ನಿಗದಿತ ಉದ್ದೇಶಕ್ಕೆ ಕಾರ್ಡ್ ಬಳಸಿಕೊಳ್ಳಬಹುದುಡಾ.ರಾಜು ಮೇತ್ರಿ ಪಶು ಸಂಗೋಪನಾ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.