
ಪ್ರಜಾವಾಣಿ ವಾರ್ತೆ
ಬೆಳಗಾವಿ: ‘ಮಾನವೀಯತೆಯೇ ಹಿಂದೂ ಧರ್ಮದ ಸಾರ. ನಮ್ಮ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮಗಳನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ. ಕೇವಲ ದ್ವೇಷದಿಂದ ದೇವರು ಮೆಚ್ಚುವುದಿಲ್ಲ. ಮನುಷ್ಯತ್ವ ಬೆಳೆಸಿಕೊಂಡಾಗಲೇ ಸಮಾಜ ಸುಂದರವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಬಸ್ತವಾಡ ಗ್ರಾಮದಲ್ಲಿ ₹2.80 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ₹1.18 ಕೋಟಿ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭಾನುವಾರ ರಾತ್ರಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ಗ್ರಾಮದ ಎಲ್ಲ ಜಾತಿಯವರೂ ಒಂದಾಗಿ ಉತ್ತಮ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದು ಮಾದರಿಯಾಗಿದೆ’ ಎಂದರು.
‘ಕ್ಷೇತ್ರ ಅಭಿವೃದ್ಧಿಯ ದಾರಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಸೋಲಿನಲ್ಲಿಯೂ ಕೆಲಸ ಮಾಡಿದ್ದರಿಂದಲೇ ಜನರ ವಿಶ್ವಾಸ ಪಡೆದು ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಲ್ಲಿ ಸ್ವಾಭಿಮಾನ ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ‘ನಾವು ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ನಂಬಿಕೆ ಇಟ್ಟವರು. ಜನರ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇವೆ; ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಜಗಳ ಹುಟ್ಟುಹಾಕುವ ರಾಜಕಾರಣ ನಮ್ಮದು ಅಲ್ಲ, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಧೋರಣೆ ನಮ್ಮದು’ ಎಂದರು.
ಮುಖಂಡರಾದ ಚಂದ್ರಕಾಂತ ಪಾಟೀಲ, ಮನೋಹರ ಬಾಂಡಗಿ, ಶಿಲ್ಪಾ ಪಾಟೀಲ, ಮಾಣಿಕ್ ಸಂಕೇಶ್ವರಿ, ಪಿಡಿಒ ಆಶಾ, ನೇಮು ಪಾಟೀಲ, ಗೋಪಾಲ ಕಾಮಾಜ, ಶಿವಾಜಿ ಕಾಕತ್ಕರ್, ಈರಪ್ಪ ಚೌಗುಲೆ ಇತರರು ಇದ್ದರು.
ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ 25 ವರ್ಷದ ಯೋಜನೆ ರೂಪಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ದೂರದೃಷ್ಟಿಯೂ ಇದೆಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ
ಕಲ್ಯಾಣಮಂಟಪ ಸಾರ್ವಜನಿಕರಿಗೆ ಅರ್ಪಣೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾರ್ವಜನಿಕರ ಹಾಗೂ ರೈತರ ಮಕ್ಕಳ ಕಲ್ಯಾಣ ಹಾಗೂ ಇತರ ಕಾರ್ಯಕ್ರಮಗಳ ಅನುಕೂಲಕ್ಕಾಗಿ ₹2 ಕೋಟಿ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಲ್ಲಿ ನಿರ್ಮಿಸಿದ ಕಲ್ಯಾಣಮಂಟಪವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಭಾನುವಾರ ನಡೆದ ಮೊದಲ ಮದುವೆಯಲ್ಲಿ ಪಾಲ್ಗೊಂಡ ಅವರು ನವದಂಪತಿಗೆ ಶುಭ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.