ADVERTISEMENT

ಜ.1ರಿಂದ 3 ರವರೆಗೆ ಜಾತ್ರೆ: ಸದ್ಭಾವದ ತಾಣ ಹುಣಶ್ಯಾಳ ಪಿಜಿ ಸಿದ್ಧಲಿಂಗೇಶ್ವರ ಮಠ

ಸ್ವಾಮೀಜಿಗಳು ಭಾಗಿ 

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:51 IST
Last Updated 1 ಜನವರಿ 2026, 6:51 IST
ಸಿದ್ಧಲಿಂಗೇಶ್ವರ ಕೈವಲ್ಯಾಶ್ರಮ
ಸಿದ್ಧಲಿಂಗೇಶ್ವರ ಕೈವಲ್ಯಾಶ್ರಮ   

ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗೇಶ್ವರ ಜಾತ್ರೆಯು ಮಠದ ಪೀಠಾಧಿಪತಿ ನಿಜಗುಣದೇವರ ಸಾನ್ನಿಧ್ಯದಲ್ಲಿ ಜ. 1ರಿಂದ 3ರವರೆಗೆ ಭಕ್ತಿಭಾವದಲ್ಲಿ ಜರುಗಲಿದೆ. ಜಾತ್ರೆಯ ಅಂಗವಾಗಿ ಮಹಾತ್ಮರ ಸತ್ಸಂಗ, ತೋಟ್ಟಿಲೋತ್ಸವ, ಕುಂಭೋತ್ಸವ, ಮಹಿಳೆಯರಿಗೆ ಉಡಿ ತುಂಬುವುದು, ತುಲಾಭಾರ, ಕಿರೀಟ ಪೂಜೆ, ತೂಗುಯ್ಯಾಲೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸದ್ಭಾವದ ತಾಣ: ’ಘಟದಿಂದ ಮಠ ಬೆಳೆಯಬೇಕು’ ಎನ್ನುವ ಸೂಕ್ತಿಯು ಹುಣಶ್ಯಾಳ ಪಿಜಿಯ ಸಿದ್ಧಲಿಂಗೇಶ್ವರ ಮಠದಲ್ಲಿ ಸಾಕಾರಗೊಂಡಿದೆ. ಮೂರು ದಶಕಗಳ ಪೂರ್ವದಲ್ಲಿ ಪ್ರವಚನ, ಆಧ್ಯಾತ್ಮಿಕ ಚಿಂತನೆಗಾಗಿ ಗ್ರಾಮಕ್ಕೆ ಬಂದವರು ನಿಜಗುಣದೇವರು. ಅವರ ತಾತ್ವಿಕ ಮಾತು, ಪ್ರವಚನಕ್ಕೆ ಪ್ರಭಾವಿತರಾಗಿ ಭಕ್ತರು ಗ್ರಾಮದಲ್ಲಿಯೇ ಅವರನ್ನು ಉಳಿಸಿಕೊಳ್ಳುವಂತೆ ಮಾಡಿದರು. ಅದರ ಫಲವಾಗಿ ನಿಜಗುಣ ಸ್ವಾಮಿಗಳು ಗ್ರಾಮದಲ್ಲಿ ಸಣ್ಣ ಕುಟೀರದಲ್ಲಿ ಉಳಿದು ಸಾಧನೆ ಮಾಡಿದರು. ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ಚಿಂತನ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಠದ ಕೀರ್ತಿಯನ್ನು ದಶದಿಕ್ಕುಗಳಿಗೆ ಬೆಳೆಸಿರುವರು.

ಅಥಣಿ ತಾಲ್ಲೂಕಿನ ನಂದೇಶ್ವರದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ಶರಣ ದಂಪತಿಗಳಿಗೆ 1961ರಲ್ಲಿ ಜನಿಸಿದ ನಿಜಗುಣದೇವರು ಬಾಲ್ಯದಲ್ಲಿ ಆಧ್ಯಾತ್ಮಿಕದತ್ತ ಒಲವು ಹೊಂದಿದ್ದರು. ಅಲ್ಲದೆ ಮದುರಖಂಡಿಯ ಸಿದ್ಧಲಿಂಗೇಶ್ವರರ ಕೃಪೆಯಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದರು. ಬೈಲಹೊಂಗಲದ ಮಹಾದೇವಾನಂದ ಸರಸ್ವತಿ ಆಶ್ರಮದಲ್ಲಿ ಸಂಸ್ಕೃತ, ಇಂಚಲ ಶಿವಾನಂದ ಭಾರತೀ ಸ್ವಾಮೀಜಿಯವರ ಕೃಪಾಶೀರ್ವಾದದಲ್ಲಿ ತತ್ವಚಿಂತನೆ, ವಚನ ಅಧ್ಯಯನ ಮಾಡಿದರಲ್ಲದೆ ಸಾಹಿತ್ಯ, ಸಂಗೀತದಲ್ಲಿ ಪಾರಂಗತರಾದರು. ಈ ಹಿನ್ನೆಲೆಯಲ್ಲಿ ಶ್ರೇಷ್ಠ ಪ್ರವಚನಕಾರರಾಗಿ ಭಕ್ತರ ಮನಗೆದ್ದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಸಾವಿರಾರು ಪ್ರವಚನ ನಡೆಸಿಕೊಟ್ಟಿದ್ದಾರೆ.

ADVERTISEMENT

ರಚನೆಗಳು: ಶ್ರೀಗಳು ಅನೇಕ ಭಕ್ತಿಯ ಹಾಡುಗಳನ್ನು ಬರೆದಿದ್ದು, ಧ್ವನಿ ಸುರಳಿ ಮಾಡಿದ್ದರೆ. ಕೈವಲ್ಯ ಕಿರಣ, ಗೀತ ಕುಸಮ, ಭಾರತಗೊಬ್ಬ ಭಾರತೀಯ, ಶಿವಾತಾರಿ ಸಿದ್ದಲಿಂಗ, ಕೈವಲ್ಯ ಕನ್ನಡಿ ಹೀಗೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಅವರ ಸಾಧನೆಯನ್ನು ಕಂಡು ಕೇದಾರದ ಪಂಚಪೀಠ ಜಗದ್ಗುರುಗಳು ‘ಪ್ರಚನ ಪ್ರಾಜ್ಞ’ ಪ್ರಶಸ್ತಿ ನೀಡಿದ್ದಾರೆ. ರೇಣುಕಾಶ್ರೀ, ಕರ್ನಾಟಕ ಭೂಷಣ, ಸಾಹಿತ್ಯ ಸುಧಾಕರ ಹೀಗೆ ಹಲವಾರು ಪ್ರಶಸ್ತಿಗಳು ಅವರ ಕಿರೀಟಕ್ಕೆ ಗರಿ ಮೂಡಿಸಿವೆ.

ಮಠದ ಆವರಣವು ಗಿಡ, ಮರಗಳಿಂದ ಹಚ್ಚುಹಸಿರಿನಿಂದ ತುಂಬಿದೆ. ಆವರಣದಲ್ಲಿ ರಂಗಮಂದಿರ, ಯಾತ್ರಿನಿವಾಸ, ಶಿವಾನುಭವ ಭವನಗಳಿವೆ. ಮಠದಲ್ಲಿ ಶಾಲೆ ತೆರೆದಿದ್ದು ಗುರುಕುಲ ಮಾದರಿಯಲ್ಲಿ ಶಿಕ್ಷಣ ಪ್ರಸಾರ ಮಾಡುತ್ತಿದ್ದಾರೆ. ಮಠಕ್ಕೆ ಸರ್ವಧರ್ಮದ ಭಕ್ತರಿದ್ದಾರ. ನಿಜಗುಣದೇವರು ಮಠವನ್ನು ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಬೆಳೆಸುವ ಮೂಲಕ ಮಠವು ‘ಸದ್ಭಾವದ ತಾಣ’ವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.