ADVERTISEMENT

ನಿರೀಕ್ಷಿಸಿರಲಿಲ್ಲ, ಖುಷಿಯಾಗಿದೆ: ಗಾಯಕ ಅನಂತ ತೇರದಾಳ

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಅನಂತ ತೇರದಾಳ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 10:24 IST
Last Updated 28 ಅಕ್ಟೋಬರ್ 2020, 10:24 IST
ಅನಂತ ತೇರದಾಳ
ಅನಂತ ತೇರದಾಳ   

ಬೆಳಗಾವಿ: ‘ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ. ಬಯಸದೇ ಬಂದ ಭಾಗ್ಯ ಇದಾಗಿದೆ. ಇದರಿಂದ ಬಹಳ ಖುಷಿಯಾಗಿದೆ’ ಎಂದು ಇಲ್ಲಿನ ಟಿಳಕವಾಡಿಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಅನಂತ ತೇರದಾಳ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸಂಗೀತ ಕ್ಷೇತ್ರದಲ್ಲಿ ನಾನು ಮಾಡಿರುವ ಸಾಧನೆಯನ್ನು ಸರ್ಕಾರ ಗುರುತಿಸಿರುವುದಕ್ಕೆ ಸಂತಸವಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಈ ಕ್ಷೇತ್ರದಲ್ಲಿ ದುಡಿದಿದ್ದೇನೆ. ಒಂದಷ್ಟು ಮಂದಿಗೆ ನನ್ನ ಅನುಭವವನ್ನು ಧಾರೆ ಎರೆದಿದ್ದೇನೆ. ಈ ಬಾರಿ ನಿಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಒಡನಾಡಿಗಳು ಹಲವು ವರ್ಷಗಳಿಂದಲೂ ರಾಜ್ಯೋತ್ಸವ ಸಂದರ್ಭದಲ್ಲಿ ಹೇಳುತ್ತಾ ಬಂದಿದ್ದರು. ಆದರೆ, ಈ ಬಾರಿ ಅದು ನಿಜವಾಗಿದೆ. ಈವರೆಗೂ ಸಿಕ್ಕಿಲ್ಲದಿರುವುದಕ್ಕೆ ಬೇಸರವೇನಿಲ್ಲ. ಸರ್ಕಾರದ ನಿರ್ಧಾರವನ್ನು ಗೌರವಿಸಿ, ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ’ ಎಂದು ತಿಳಿಸಿದರು.

ಅನೇಕ ಬಡ ಮಕ್ಕಳಿಗೆ ಅವರು ಉಚಿತವಾಗಿ ಗಾಯನ ತರಬೇತಿ ನೀಡುತ್ತಿದ್ದಾರೆ. 7ನೇ ವರ್ಷದವರಿದ್ದಾಗಲೇ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾದ ಅವರು ಜೀವನವನ್ನು ಅದಕ್ಕಾಗಿಯೇ ಮೀಸಲಿಟ್ಟವರು. ಪ್ರಾಥಮಿಕ ಸಂಗೀತ ಶಿಕ್ಷಣವನ್ನು ಹಾರ್ಮೋನಿಯಂ ವಾದಕ ಬಾಬುರಾವ ಬೋರಕರ ಅವರಲ್ಲಿ ಪಡೆದರು. ನಂತರ, ಬಿ.ಡಿ. ಜೋಪ್ಯೆ, ಆರ್‌.ಎನ್. ಜೋಶಿ ಪಾಶ್ಚಾಪೂರಕರ ಅವರ ಮಾರ್ಗದರ್ಶನ ಪಡೆದರು. 1983ರಲ್ಲಿ ಪಂಡಿತ್ ಭೀಮಸೇನ ಜೋಶಿ ಅವರಿಂದಲೂ ಕಲಿತರು. 79 ವರ್ಷದ ಅವರು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮೊದಲಾದ ರಾಜ್ಯಗಳಲ್ಲಿ ಹಲವು ದೊಡ್ಡ ನಗರಗಳಲ್ಲಿ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ. ಸಂಗೀತ ರಸಿಕರ ಮನ ತಣಿಸಿದ್ದಾರೆ. ಅವರಿಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಸಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.