ADVERTISEMENT

ನನ್ನದು ಬಸವ ಕೃಪ, ಬಿಜೆ‍ಪಿ ಕೇಶವ ಕೃಪ: ಸಿ.ಎಂ. ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 10:22 IST
Last Updated 18 ಡಿಸೆಂಬರ್ 2020, 10:22 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಬೆಳಗಾವಿ: ‘ನಾನು ಬಿಜೆಪಿ ಸೇರುವುದಿಲ್ಲ. ನನ್ನದು ಬಸವ ಕೃಪ; ಅದು ಕೇಶವ ಕೃಪ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಅವರು, ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸುವುದಕ್ಕಾಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲು ಶುಕ್ರವಾರ ಇಲ್ಲಿಗೆ ಬಂದಿದ್ದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಬಿಜೆಪಿಯೊಂದಿಗೆ ನನಗೆ ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಅಲ್ಲಿ ಕೆಲವರು ಒಳ್ಳೆಯವರೂ ಇದ್ದಾರೆ. ಆದರೆ, ಅಲ್ಲಿಗೆ ಹೋಗಲು ಕಷ್ಟ’ ಎಂದರು.

ADVERTISEMENT

‘ಬೆಳಗಾವಿಯಲ್ಲಿ ಸ್ನೇಹಿತರೊಂದಿಗೆ ಚರ್ಚಿಸಿದ್ದೇನೆ. ಹೊಸಬರನ್ನು ಪರಿಚಯ ಮಾಡಿಕೊಂಡಿದ್ದೇನೆ. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ ಎಲ್ಲಾ ಸಮುದಾಯದ ಮುಖಂಡರ ಜೊತೆಗೆ ಚರ್ಚಿಸುತ್ತಿದ್ದೇನೆ. ಅವರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತೀರ್ಮಾನ ಮಾಡುತ್ತೇನೆ’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷವನ್ನು ಜನರು ಕೈ ಬಿಟ್ಟಿದ್ದಾರೆ. ನಾಯಕರು ಬೆಂಗಳೂರು, ದೆಹಲಿಯಲ್ಲಿ ಕುಳಿತು ಚರ್ಚಿಸುತ್ತಾರೆ. ಹೀಗಾಗಿ, ಆ ಪಕ್ಷ ಜನರಿಂದ ದೂರವಾಗಿದೆ’ ಎಂದು ವಿಶ್ಲೇಷಿಸಿದರು.

‘ಕಾಂಗ್ರೆಸ್‌ನವರು ರಾಜಕೀಯವಾಗಿ ನಿಮ್ಮನ್ನು ತುಳಿದರೇ’ ಎಂಬ ಪ್ರಶ್ನೆಗೆ, ‘ತುಳಿಯಲು ನಾನು ಹಗುರವಾಗಿಲ್ಲ. 110 ಕೆ.ಜಿ. ಇದ್ದೇನೆ. ಆದರೆ, ಕಾಂಗ್ರೆಸ್‌ನಲ್ಲಿ ನನಗೆ ಪರದೆ ಹಾಕಿದ್ದರು. ಆ ಪರದೆಯಿಂದ ಹೊರಗೆ ಬಂದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ನನ್ನ ಸ್ನೇಹಿತರು. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಆದರೆ ಮನೆ ಕಟ್ಟಿದವರು ಮನೆಯಲ್ಲಿ ಇರಲ್ಲ. ಕಟ್ಟಿದವರನ್ನು ಒಂದೆರಡು ಮೋಸಂಬಿ ಕೊಟ್ಟು; ಶಾಲು ಹೊದಿಸಿ ಹೊರ ಹಾಕುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಕೇಂದ್ರ ಸರ್ಕಾರವು ಹಸಿದವರಿಗೆ ಅನ್ನ ಕೊಟ್ಟಿಲ್ಲ. ಗೋ ಹತ್ಯೆ ನಿಷೇಧ ಒಳ್ಳೆಯದು. ಹಸು ಹಾಲು ಕೊಡುವುದನ್ನು ನಿಲ್ಲಿಸಿದಾಗ ಏನು ಮಾಡುವುದು?’ ಎಂದು ಕೇಳಿದರು.

‘ದೆಹಲಿ ಬಹಳ ದೂರ ಎನ್ನುವಂತಹ ಸ್ಥಿತಿ ರಾಷ್ಟ್ರೀಯ ಪಕ್ಷಗಳಲ್ಲಿದೆ. ಪ್ರಾದೇಶಿಕ ಪಕ್ಷದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಇಬ್ಬರ ವ್ಯಕ್ತಿತ್ವವೂ ಒಂದೆ’ ಎಂದರು.

ಇದಕ್ಕೂ ಮುನ್ನ ಅವರು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಜೆಡಿಎಸ್‌ ಮುಖಂಡರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.