ADVERTISEMENT

‘ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ, ಪ್ರೋತ್ಸಾಹ’: ಸಚಿವ ಜಗದೀಶ ಶೆಟ್ಟರ್

ಪ್ರಾದೇಶಿಕ ಉದ್ಯೋಗ ಮೇಳ;

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:00 IST
Last Updated 28 ಫೆಬ್ರುವರಿ 2020, 13:00 IST
ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್  ಮಾತನಾಡಿದರು.
ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್  ಮಾತನಾಡಿದರು.   

ಬೆಳಗಾವಿ: ‘ರಾಜ್ಯದ 2 ಹಾಗೂ 3ನೇ ಹಂತದ ನಗರಗಳಲ್ಲಿ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡಲು ತೀರ್ಮಾನಿಸಲಾಗಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಬೆಳಗಾವಿ ಹಾಗೂ ಧಾರವಾಡ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ಎಸ್. ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2019– 2024ರ ಕೈಗಾರಿಕಾ ನೀತಿಗೆ ಪರಿಷ್ಕರಣೆ ಮಾಡಲಾಗಿದೆ. ಇಂತಹ ಪ್ರದೇಶಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದಆಯಾ ಪ್ರದೇಶದ ಅಭಿವೃದ್ಧಿಯಾಗಲಿದೆ ಜೊತೆಗೆ ಸ್ಥಳೀಯ ಯುವಕರಿಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದರು.

ADVERTISEMENT

‘ಇಲ್ಲಿನ ಮೇಳದಲ್ಲಿ 162 ಕಂಪನಿಗಳು ಭಾಗವಹಿಸಿವೆ. 9,500 ಉದ್ಯೋಗ ಒದಗಿಸಲು ಈ ಕಂಪನಿಗಳಲ್ಲಿ ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿ’ ಎಂದು ತಿಳಿಸಿದರು.

ಮಹದಾಯಿ– ಕೇಂದ್ರದ ಕೊಡುಗೆ:‘ಮಹದಾಯಿ ನೀರು ಬಳಕೆ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ಈ ಭಾಗದ ಜನರಿಗೆ ಕೇಂದ್ರ ಸರ್ಕಾರ ದೊಡ್ಡ‌ ಕೊಡುಗೆ ನೀಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನೀರಾವರಿ ಇಲಾಖೆಯ ಸಚಿವ ಶೆಖಾವತ್‌ ಅಭಿನಂದನಾರ್ಹರು’ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು, ‘ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೊರಗು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಿವಾರಣೆಯಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ಜನರ ಅದರಲ್ಲೂ ಮಹಿಳಾ ಸಮುದಾಯದ‌ ಸಬಲೀಕರಣದ ಅಗತ್ಯವಿದೆ. ತಾಲ್ಲೂಕು ಮಟ್ಟದಲ್ಲಿ ಕೂಡ ಇಂತಹ ಮೇಳ ಆಯೋಜಿಸಬೇಕು’ ಎಂದು ಮನವಿ ಮಾಡಿಕೊಂಡರು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ‘ಉದ್ಯೋಗಕ್ಕಾಗಿ ಅಲೆದಾಡದೇ ಸ್ವಯಂ ಉದ್ಯೋಗ, ಕಂಪನಿ ಸ್ಥಾಪಿಸಿ ಇತರರಿಗೆ ಉದ್ಯೋಗ ಕಲ್ಪಿಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

ಶಾಸಕರಾದ ಅಭಯ ಪಾಟೀಲ ಮಾತನಾಡಿ, ‘ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ‘ಬೆಳಗಾವಿಯ ಉತ್ಕೃಷ್ಟ ಗುಣಮಟ್ಟದ ತರಕಾರಿಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಸರಕು ವಿಮಾನ ಸೌಲಭ್ಯ ಕಲ್ಪಿಸಬೇಕು ಮತ್ತು ಅತೀ ಹೆಚ್ಚು ವಿದ್ಯಾವಂತರು ಇರುವ ಈ ಭಾಗದಲ್ಲಿ ಐ.ಟಿ. ಪಾರ್ಕ್ ಸ್ಥಾಪಿಸುವ ಅಗತ್ಯವಿದೆ’ ಎಂದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ‘ರಾಜ್ಯ ಹಾಗೂ ನೆರೆಯ ರಾಜ್ಯಗಳ 162 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು, 16 ಸಾವಿರ ಉದ್ಯೋಕಾಂಕ್ಷಿಗಳು ನೋಂದಣಿ ಮಾಡಿಕೊ‌ಂಡಿದ್ದಾರೆ’ ಎಂದು ತಿಳಿಸಿದರು.

ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ವೈ.ಹೆಳವರ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ ಕುಪ್ಪಸಗೌಡರ ಹಾಗೂ ಸರ್ವಮಂಗಳ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.