ADVERTISEMENT

ರಾಮದುರ್ಗ ಪಟ್ಟಣದಲ್ಲಿ ಹೆಚ್ಚಿದ ಕಳವು: ಆತಂಕ

ಎರಡು ತಿಂಗಳಲ್ಲಿ 15ಕ್ಕೂ ಹೆಚ್ಚು ಕಳವು: ಸಿಗದ ಕಳ್ಳರ ಸುಳಿವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 5:52 IST
Last Updated 3 ಜುಲೈ 2025, 5:52 IST
ರಾಮದುರ್ಗದಲ್ಲಿ ಈಚೆಗೆ ನಡೆದ ಅಂಗಡಿಗಳ ಸರಣಿ ಕಳವಿನ ಬಗ್ಗೆ ಪೊಲೀಸ್‌ ಅಧಿಕಾರಿಗಳು ಜನರಿಂದ ಮಾಹಿತಿ ಸಂಗ್ರಹಿಸಿದರು 
ರಾಮದುರ್ಗದಲ್ಲಿ ಈಚೆಗೆ ನಡೆದ ಅಂಗಡಿಗಳ ಸರಣಿ ಕಳವಿನ ಬಗ್ಗೆ ಪೊಲೀಸ್‌ ಅಧಿಕಾರಿಗಳು ಜನರಿಂದ ಮಾಹಿತಿ ಸಂಗ್ರಹಿಸಿದರು    

ರಾಮದುರ್ಗ: ಪಟ್ಟಣದಲ್ಲಿ ಎರಡು ತಿಂಗಳಿಂದ ಸರಣಿ ಕಳವು ಪ್ರಕರಣ ನಡೆಯುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. 60 ದಿನಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿವೆ.

ಜೂನ್‌ 30ರಂದು ರಾತ್ರಿ ಪಟ್ಟಣದ ಏಳು ವ್ಯಾಪಾರ ಮಳಿಗೆಗಳ ಬೀಗ ಮುರಿದು ಕಳವು ಯತ್ನ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಎರಡು ತಿಂಗಳಲ್ಲಿ ಪಟ್ಟಣದಲ್ಲಿಯೇ ಹೆಚ್ಚು ಕಳವು ಪ್ರಕರಣಗಳು ನಡೆದಿವೆ.

ಮನೆ ಹಾಗೂ ಅಂಗಡಿಗಳಲ್ಲಿ ಯಾರೂ ಇಲ್ಲದ ಸಮಯದಲ್ಲೇ ಕಳವು ಪ್ರಕರಣಗಳು ನಡೆದಿವೆ. ಇದರಿಂದ ಪಟ್ಟಣದ ಜನ ಮನೆ, ಅಂಗಡಿ ಬಿಟ್ಟು ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ADVERTISEMENT

ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಜುನಿಪೇಟದಲ್ಲಿಯ ರಾಜು ಬಾಳಿಕಾಯಿ ಅವರ ಎಲೆಕ್ಟ್ರಿಕ್ ಅಂಗಡಿ, ಶ್ರೀಧರ ಪುರಂದರೆ ಅವರ ಗಡಿಯಾರದ ಅಂಗಡಿ, ಮಹಾಂತ ಕಂಪ್ಯೂಟರ್, ಭವಾನಿ ರೆಡಿಮೆಡ್ ಬಟ್ಟೆ ಅಂಗಡಿಯ ಬೀಗ ಒಡೆದು ಕಳವು ಯತ್ನ ನಡೆದಿದೆ. ಯಾದವಾಡ ಅವರ ಎಣ್ಣೆ ಅಂಗಡಿ ಹಾಗೂ ಅಲ್ಲಮಪ್ರಭು ಪೋಟೊ ಸ್ಟುಡಿಯೊದಲ್ಲಿ ಅಲ್ಪ ಮೊತ್ತದ ಹಣ ಕಳವಾಗಿದೆ ಎಂದು ಮಾಲೀಕರು ಹೇಳಿದ್ದಾರೆ. ಆದರೆ, ಈ ಕುರಿತು ಯಾರೂ ದೂರು ನೀಡಿಲ್ಲ.

ಕೆಲವರು ಕುಡಿತದ ಆಸೆಗೆ ಬೀಗ ಹಾಕಿದ ಮನೆ, ಅಂಗಡಿಗಳಲ್ಲಿ ಕಳವು ಮಾಡಿದ್ದಾರೆ. ಸರಿಯಾಗಿ ರಾತ್ರಿ ಗಸ್ತು ಮಾಡಿದರೆ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ವಹಿಸಿದರೆ ಇಂಥ ಘಟನೆಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ಅನುಭವಿ ಪೊಲೀಸರು.

ಜಿಲ್ಲೆಯ ವಿವಿಧೆಡೆ ಬಂದೋಬಸ್ತ್‌ಗೆ ತೆರಳಿದ್ದರಿಂದ ಸಿಬ್ಬಂದಿ ಕೊರತೆಯಾಗಿದೆ. ಸರಣಿ ಕಳವು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು

–ವಿನಾಯಕ ಬಡಿಗೇರ, ಸಿಪಿಐ ರಾಮದುರ್ಗ

ಫಲ ನೀಡದ ಡಿಎಸ್‌ಪಿ ಕಚೇರಿ

ಕಳೆದ ಅವಧಿಯಲ್ಲಿ ಮುಖ್ಯ ಸಚೇತಕರಾಗಿದ್ದ ಶಾಸಕ ಅಶೋಕ ಪಟ್ಟಣ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ರಾಮದುರ್ಗದಲ್ಲಿ ಹೆಸ್ಕಾಂ ಆರ್‌ ಮತ್ತು ಡಿಎಸ್‍ಪಿ ಕಚೇರಿಗಳನ್ನು ಆರಂಭಿಸಿದ್ದರು. ಡಿಎಸ್‍ಪಿ ಕಚೇರಿ ರಾಮದುರ್ಗದಲ್ಲಿದ್ದರೂ ಹತ್ತು ತಿಂಗಳ ಮುಂಚೆ ಆಗಮಿಸಿರುವ ಡಿಎಸ್‍ಪಿ ಚಿದಂಬರ ಮಡಿವಾಳರ ಅವರು ಪಟ್ಟಣದಲ್ಲಿ ನಡೆಯುವ ಪೊಲೀಸ್ ಇಲಾಖೆಯ ಶಾಂತಿಸಭೆಗಳು ಪ್ರತಿಭಟನೆಗಳು ಸೇರಿದಂತೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಸಿಗುವುದಿಲ್ಲ. ಡಿಎಸ್‍ಪಿ ಅವರ ಮಾರ್ಗದರ್ಶನ ಕೊರತೆಯಿಂದಲೂ ಕಳವು ಪ್ರಕರಣ ಹೆಚ್ಚುತ್ತಿವೆ ಎಂಬುದು ಜನರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.