ಬೆಳಗಾವಿ: ‘ಇಂದು ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದರೂ ದೌರ್ಜನ್ಯ, ಕ್ರೌರ್ಯ ಹೆಚ್ಚುತ್ತಿದೆ. ಯಾರನ್ನೂ ಆದರ್ಶ ಎಂದು ಪರಿಗಣಿಸುವ ಸ್ಥಿತಿ ಇಲ್ಲ. ಇಂಥ ಸಂದರ್ಭ ರಂಗಭೂಮಿ ಮೂಲಕ ಸಮಾಜಕ್ಕೆ ಚುಚ್ಚುಮದ್ದು ಕೊಡಬೇಕಾದ ಅನಿವಾರ್ಯತೆ ಇದೆ’ ಎಂದು ರಂಗಕರ್ಮಿ ಶಶಿಧರ ನರೇಂದ್ರ ಹೇಳಿದರು.
ಇಲ್ಲಿ ರಂಗಸೃಷ್ಟಿ ಗುರುವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ನಂತರ ಕಳೆದು ಹೋದ ಮೌಲ್ಯಗಳನ್ನು ಈಗ ಹುಡುಕುವ ಪರಿಸ್ಥಿತಿ ಇದೆ. ರಂಗಭೂಮಿ ಯಾವುದನ್ನು ಪ್ರತಿನಿಧಿಸಬೇಕು ಎನ್ನುವ ಗೊಂದಲವಿದೆ. ಎಲ್ಲಿ ಆಶಾಭಾವ ಇಟ್ಟುಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಇಷ್ಟುವರ್ಷದ ನಂತರ ಭಾರತಕ್ಕೆ ತರುತ್ತಿದ್ದೇವೆ. ಭಾರತದಲ್ಲಿ ಅದ್ಭುತ ಮಾನವ ಶಕ್ತಿ ಇದ್ದರೂ ಸಂಕಲ್ಪ ಶಕ್ತಿ ಸೋಲುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಶಿರೀಷ ಜೋಶಿ ಅವರ ‘ಪ್ರಿಂಟಿಂಗ್ ಮಷಿನ್’ ಮತ್ತು ‘ಮೀ ಟೂ’ ನಾಟಕಗಳ ಗ್ರಂಥ ಬಿಡುಗಡೆಗೊಳಿಸಿದ ಸಾಹಿತಿ ಬಸವರಾಜ ಜಗಜಂಪಿ, ‘ಸಾಹಿತ್ಯ ಯಾರ ಸ್ವತ್ತೂ ಅಲ್ಲ. ಅದು ಎಲ್ಲರ ಆಸ್ತಿ. ತಂಡವನ್ನು ಕಟ್ಟಿ ಮುನ್ನಡೆಸುವುದು ಸುಲಭವಲ್ಲ. ಶಿರೀಷ ಜೋಶಿ ಸೇವಾನಿವೃತ್ತಿ ಹೊಂದಿದ ನಂತರ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಂಗಸೃಷ್ಟಿ ತಂಡವೂ ಕ್ರಿಯಾಶೀಲವಾಗಿ ದುಡಿಯುತ್ತಿದೆ’ ಎಂದರು.
ಸಾಹಿತಿ ಸರಜೂ ಕಾಟ್ಕರ್, ‘ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರತಿ ಲೇಖಕರ ತಲಾ 500 ಪುಸ್ತಕ ಖರೀದಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ 2021ರಿಂದ ಪುಸ್ತಕಗಳ ಖರೀದಿಯಾಗಿಲ್ಲ. ಕೇರಳ, ತಮಿಳುನಾಡು ಮಾದರಿಯಲ್ಲಿ ಇಲ್ಲಿನ ಸರ್ಕಾರವೂ ಕ್ರಮ ವಹಿಸಬೇಕು. ಪುಸ್ತಕೋದ್ಯಮಕ್ಕೆ ಸಹಾಯ ಮಾಡಬೇಕು’ ಎಂದು ಕೋರಿದರು.
ರಂಗಕರ್ಮಿ ಶಂಕರ ಅರಕೇರಿ ಅವರಿಗೆ ರಂಗಗೌರವ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಅಧ್ಯಯನ ಪೀಠದ ಸಂಯೋಜಕ ಎಚ್.ಬಿ.ನೀಲಗುಂದ, ಶಿರೀಷ ಜೋಶಿ ಮಾತನಾಡಿದರು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಎಂ.ಕೆ.ಹೆಗಡೆ ಸ್ವಾಗತಿಸಿದರು. ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಜಿ.ಕೆಂಪಣ್ಣವರ ಅತಿಥಿ ಪರಿಚಯಿಸಿದರು. ಜಯಶ್ರೀ ಕೆ.ಎಂ. ರಂಗಭೂಮಿ ಸಂದೇಶ ವಾಚಿಸಿದರು. ಶರಣಯ್ಯ ಮಠಪತಿ ಮತ್ತು ಶ್ರದ್ಧಾ ಪಾಟೀಲ ನಿರೂಪಿಸಿದರು. ಶರಣಗೌಡ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.