
ಬೈಲಹೊಂಗಲ: ಅಪಘಾತದಲ್ಲಿ ಮೃತಪಟ್ಟ ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಯ್ಯ ವೀರಯ್ಯ ಸಾಲಿಮಠ (42) ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಸಮೀಪದ ಮುರಗೋಡ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಶನಿವಾರ ನೆರವೇರಿತು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಚೊಲೊ ಕೆಲಸ ಮಾಡಿ ದೊಡ್ಡ ಹೆಸರ ಮಾಡಿದ್ದ ನನ್ನ ಮಗನ್ನ ಯಾಕ ಜಲ್ದಿ ಕರಕೊಂಡಿಯೊ ದೇವ್ರ ಎಂದು ತಂದೆ ವೀರಯ್ಯ, ತಾಯಿ ಪಾರ್ವತಿ ಕಣ್ಣೀರು ಹಾಕಿದರು. ಪತ್ನಿ ಶೀಲಾ, ಮಕ್ಕಳಾದ ತನ್ಮಯ, ಚಿನ್ಮಯ, ಸಹೋದರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಪಂಚಾಕ್ಷರಯ್ಯ ಸಾಲಿಮಠ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗ್ರಾಮಸ್ಥರು ಸಾಲಿಮಠ ಅವರ ಪುತ್ಥಳಿ ನಿರ್ಮಿಸಬೇಕೆಂದು ಆಗ್ರಹಿಸಿದರು. ಪಾರ್ಥಿವ ಶರೀರದ ಅಂತಿಮ ಯಾತ್ರೆ ಮೆರವಣಿಗೆ ರಸ್ತೆಯುದ್ದಕ್ಕೂ ಮತ್ತೆ ಹುಟ್ಟಿ ಬನ್ನಿ ಸಾಲಿಮಠ ಸರ್, ಅಮರ್ ಹೈ ಸಾಲಿಮಠ ಅಮರ್ ಹೈ ಜಯ ಘೋಷಗಳು ಕೇಳಿ ಬಂದವು. ಪೂಜಾ ವಿಧಿವಿಧಾನ ನಡೆಯಿತು. ಪುತ್ರ ಅಂತ್ಯಕ್ರಿಯೆ ನೆರವೆರಿಸಿದರು.
ಬೈಲಹೊಂಗಲ ಪಟ್ಟಣದ ಹೃದಯ ಭಾಗವಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾಲಿಮಠ ಅವರ ಪಾರ್ಥಿವ ಶರೀರಕ್ಕೆ ಜನರು ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೂಮಾಲೆ ಅರ್ಪಿಸಿ ಮಾತನಾಡಿ, ಸಾಲಿಮಠ ಅವರು ದಿಟ್ಟತನ ಹಾಗೂ ಜನಪರ ಆಡಳಿತಕ್ಕೆ ಹೆಸರುವಾಸಿಯಾಗಿ ಇಲಾಖೆಯ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ಮಾಡಿದ ಕಾರ್ಯ ಸ್ಮರಣೀಯ. ದಕ್ಷ ಅಧಿಕಾರಿಯಾಗಿದ್ದ ಅವರನ್ನು ಕಳೆದುಕೊಂಡಿದ್ದು ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದರು.
ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಡಿವೈಎಸ್ಪಿ ವೀರಯ್ಯ ಹಿರೇಮಠ, ತಹಶೀಲ್ದಾರ್ ಹನಮಂತ ಶಿರಹಟ್ಟಿ, ಸಿಪಿಐ ಪ್ರಮೋದ ಯಲಿಗಾರ, ವಿಜಯ ಮೆಟಗುಡ್ಡ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ, ಇಲಾಖೆ ಅಧಿಕಾರಿಗಳು, ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗ ಸದಸ್ಯರು ಹಲವಾರು ಗಣ್ಯರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.