ಬೆಳಗಾವಿ: ‘ಮಹಾತ್ಮ ಗಾಂಧೀಜಿ ಬೆಳಗಾವಿಗೆ 1924ರಲ್ಲಿ ಮತ್ತು ಹುದಲಿ ಗ್ರಾಮಕ್ಕೆ 1937ರಲ್ಲಿ ಬಂದಿದ್ದರು. ಆಗ ಏನೆಲ್ಲ ನಡೆದಿತ್ತು ಎಂಬುದನ್ನು ಕೇಳಿ ತಿಳಿದುಕೊಂಡಿದ್ದೆ ಹೊರತು ನೋಡಲು ಆಗಿರಲಿಲ್ಲ. ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೆನಪಿನಲ್ಲಿ ಶತಮಾನೋತ್ಸವದ ಆಚರಣೆ ನೋಡಿ ಕಣ್ತುಂಬಿಕೊಂಡೆ’ ಎಂದು ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಹೇಳಿದರು.
‘ಗಾಂಧಿ ಭಾರತ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಗಾಂಧೀಜಿ ಹೇಳಿದ್ದ ಎಲ್ಲವನ್ನೂ ಪಾಲಿಸಿದೆವು. ದೇಶದ ಸ್ವಾತಂತ್ರ್ಯಕ್ಕೆ ಅಹಿಂಸೆ ಮಾರ್ಗದಿಂದ ಅಲ್ಲದೇ ಬೇರೆ ಬೇರೆ ಸ್ವರೂಪದಲ್ಲಿ ಹೋರಾಟ ಮಾಡಿದೆವು. ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವುದು ಮಾತ್ರವೇ ನಮ್ಮ ಗುರಿಯಾಗಿತ್ತು’ ಎಂದರು.
‘1924ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಅದನ್ನು ಗ್ರಹಿಸಲು ನಾನು ತುಂಬಾ ಚಿಕ್ಕವನಿದ್ದೆ. 1937ರಲ್ಲಿ ಗಾಂಧೀಜಿ ಅವರು ಹುದಲಿ ಗ್ರಾಮಕ್ಕೆ ನೋಡಲು ಸಾಧ್ಯವಾಗಿರಲಿಲ್ಲ. ಆದರೆ, 1942ರಲ್ಲಿ ಅವರು ನೀಡಿದ ‘ಮಾಡು ಇಲ್ಲವೇ ಮಡಿ’ ಎಂಬ ಕರೆ ನಮ್ಮೆಲ್ಲರನ್ನೂ ಬಡಿದೆಬ್ಬಿಸಿತು’ ಎಂದು ಅವರು ನೆನಪಿಸಿಕೊಂಡರು.
‘1942 ರಿಂದ 1947ರವರೆಗಿನ ಅವಧಿಯಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಾಗ, ಸ್ನೇಹಿತರಾದ ಯಾಳಗಿ, ಕಾಮತ್, ಕರಿಲಿಂಗ ಮತ್ತಿತರರು ಸೇರಿ ರೈಲ್ವೆ ಹಳಿಯ ಕಂಬಿಗಳನ್ನು ಕೀಳುತ್ತಿದ್ದೆವು. ಅಂಚೆ ಡಬ್ಬಿ ಸುಟ್ಟು ಹಾಕುತ್ತಿದ್ದೆವು. ಇದಕ್ಕಾಗಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಯನ್ನೂ ಅನುಭವಿಸಿದೆವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂದು 1947ರ ಮಧ್ಯರಾತ್ರಿ ಘೋಷಣೆಯಾದಾಗ, ನಾವೆಲ್ಲರೂ ವೀರಸೌಧದಲ್ಲಿ ಸಂಭ್ರಮಿಸಿದ್ದೆವು’ ಎಂದು ತಿಳಿಸಿದರು.
ಶತಾಯುಷಿಯಾಗಿರುವ ಅವರಿಗೆ ನೆನಪಿನ ಶಕ್ತಿ ಉತ್ತಮವಾಗಿದೆ. ಯಾವುದೇ ಪ್ರಮುಖ ಘಟನೆಗಳನ್ನು ಮರೆಯದೇ ಅದರ ತಾರೀಖು ಮತ್ತು ಮಹತ್ವವನ್ನು ವಿವರಿಸುತ್ತಾರೆ. ಉತ್ತಮ ಆರೋಗ್ಯ ಕಾಯ್ದುಕೊಂಡಿರುವ ಅವರು 2006ರಲ್ಲಿ ರಚಿಸಿದ ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿಗಳ ಸಂಘದ ಮೂಲಕ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಸಂಘದ ಮೂಲಕ ಅನಾಥಾಶ್ರಮಗಳಿಗೆ ಮತ್ತು ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತದೆ.
‘ಹಲವು ವರ್ಷಗಳಿಂದ ಮಧುಮೇಹ ಮತ್ತು ಅಸ್ತಮಾ ಇದೆ. ಆದರೆ, ಅದರಿಂದ ಆಗುವ ನಿಶ್ಯಕ್ತಿಗೆ ಮತ್ತು ಇನ್ನಿತರ ಅನಾರೋಗ್ಯ ಸಮಸ್ಯೆಗೆ ಅವಕಾಶ ಮಾಡಿಕೊಟ್ಟಿಲ್ಲ. ನಸುಕಿನ 3.30ಕ್ಕೆ ಎದ್ದು ಪ್ರತಿ ದಿನ 4 ಕಿ.ಮೀ. ನಡೆಯುತ್ತೇನೆ. ಬೆಳಿಗ್ಗೆ ಹಾಲು ಮತ್ತು ಸಂಜೆ ಚಹಾ ಕುಡಿಯುತ್ತೇನೆ. ಮನೆಯಲ್ಲಿ ಜೋಳದ ರೊಟ್ಟಿ ಮತ್ತು ಅನ್ನ ಹೊರತುಪಡಿಸಿದರೆ ಹಣ್ಣುಗಳನ್ನು ತಿನ್ನಲ್ಲ. ಹೋಟೆಲ್ ತಿಂಡಿಯನ್ನೂ ಸವಿಯುವುದಿಲ್ಲ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಕೆಲವಷ್ಟು ಪಥ್ಯ, ಯೋಗ ಮತ್ತು ವ್ಯಾಯಾಮ ಮಾಡುತ್ತಿರುವುದರಿಂದ ಆರೋಗ್ಯ ಚೆನ್ನಾಗಿ ಕಾಯ್ದುಕೊಳ್ಳಲು ಸಾಧ್ಯವಾಗಿದೆ’ ಎಂದರು.
ಗಾಂಧೀಜಿ ಸ್ಮರಣೆಯಲ್ಲಿ ವೀರಸೌಧಕ್ಕೆ ಇನ್ನಷ್ಟು ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು. ಗಾಂಧೀಜಿಯವರ ಸಂದೇಶ ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪುವಂತೆ ಮಾಡಬೇಕು–ರಾಜೇಂದ್ರ ಕಲಘಟಗಿ ಸ್ವಾತಂತ್ರ್ಯ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.