ADVERTISEMENT

ಅನುದಾನ ‘ತಡೆ’ಗೆ ಕಾರಣವಾದ ಸಾಮಗ್ರಿ ವೆಚ್ಚ

30 ಗ್ರಾಮ ಪಂಚಾಯ್ತಿಗಳಿಗೆ ನೋಟಿಸ್ ನೀಡಿದ ಸಿಇಒ

ಎಂ.ಮಹೇಶ
Published 17 ಅಕ್ಟೋಬರ್ 2019, 8:55 IST
Last Updated 17 ಅಕ್ಟೋಬರ್ 2019, 8:55 IST
ಕೆ.ವಿ. ರಾಜೇಂದ್ರ
ಕೆ.ವಿ. ರಾಜೇಂದ್ರ   

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ 2019–20ನೇ ಸಾಲಿನಲ್ಲಿ ಕೂಲಿ ಬದಲಿಗೆ ಸಾಮಗ್ರಿ ಆಧಾರಿತ ಕಾಮಗಾರಿಗೆ ಆದ್ಯತೆ ನೀಡಿದ 30 ಗ್ರಾಮ ಪಂಚಾಯ್ತಿಗಳ ಪಿಡಿಒಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಯೋಜನೆಯಡಿ ದೊರೆಯುವ ಅನುದಾನವನ್ನು ನಿಯಮದ ಪ್ರಕಾರ, ಶೇ 60ರಷ್ಟನ್ನು ಕೂಲಿಗೆ ಮತ್ತು ಶೇ 40ರಷ್ಟನ್ನು ಸಾಮಗ್ರಿ ವೆಚ್ಚಕ್ಕೆಂದು ಬಳಸಬೇಕು. ಆದರೆ, ಈ ಪಂಚಾಯ್ತಿಗಳಲ್ಲಿ ನಿಯಮ ಉಲ್ಲಂಘಿಸಿರುವುದನ್ನು ಗುರುತಿಸಲಾಗಿದೆ. ಅಕುಶಲ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಕೆಲಸ ನೀಡಿ ಮಾನವ ದಿನಗಳನ್ನು ಸೃಜಿಸುವುದರೊಂದಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂಬ ಸೂಚನೆ ಕಡೆಗಣಿಸಿರುವುದು, 60:40ರ ಅನುಪಾತ ನಿರ್ವಹಿಸದಿರುವುದನ್ನು ಗಂಭಿರವಾಗಿ ಪರಿಗಣಿಸಲಾಗಿದೆ.

ಅನುದಾನ ನಿಲ್ಲಿಸಲಾಗಿದೆ!:ಖಾನಾಪುರ ತಾಲ್ಲೂಕೊಂದರಲ್ಲೇ, ಅನುಪಾತ ನಿರ್ವಹಿಸದಿರುವ 17 ಪಂಚಾಯ್ತಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ‘ಪಿಡಿಒಗಳು ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸಿರುವುದರಿಂದ ಜಿಲ್ಲೆಯ ಸಾಮಗ್ರಿ ವೆಚ್ಚದ ಅನುಪಾತ ಶೇ 40ಕ್ಕಿಂತ ಹೆಚ್ಚಾಗಿದೆ. ಹೀಗಾಗಿ, ಜಿಲ್ಲೆಗೆ ಸಾಮಗ್ರಿ ಅನುದಾನ ಬಿಡುಗಡೆಯನ್ನು ತಂತ್ರಾಂಶದಲ್ಲಿ ಲಾಕ್‌ ಮಾಡಲಾಗಿದೆ. ಹೀಗಾಗಿ, ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಬಾರದೇಕೆ? 7 ದಿನಗಳ ಒಳಗೆ ಲಿಖಿತ ಹಾಗೂ ಸಮಂಜಸ ಉತ್ತರವನ್ನು ಖುದ್ದಾಗಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಏಕಪಕ್ಷೀಯವಾಗಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ. ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ, ‘ಅಕ್ರಮ ನಡೆದಿದೆ ಎನ್ನುವುದಕ್ಕೆ ಬರುವುದಿಲ್ಲ. ಆದರೆ, ಅನುಪಾತ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ, ನೋಟಿಸ್ ಜಾರಿಗೊಳಿಸಿದ್ದೇನೆ. ಅನುದಾನ ಲಾಕ್‌ ಆಗಿರುವುದರಿಂದಲೂ ಜಿಲ್ಲೆಗೆ ತೊಂದರೆಯಾಗಿದೆ’ ಎಂದು ತಿಳಿಸಿದರು.

ಅಧಿಕಾರಿಗಳ ತಂಡ ರಚನೆ:‘ನಿಯಮಾನುಸಾರ ಸಾರ್ವಜನಿಕ ಆಸ್ತಿ ನಿರ್ಮಾಣದ ಕೆಲಸ ಮಾಡಿದ್ದರೆ ತೊಂದರೆ ಇಲ್ಲ. ಈ ಪಂಚಾಯ್ತಿಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡುವುದಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ರೇಷ್ಮೆ ಇಲಾಖೆ ಉಪನಿರ್ದೇಶಕರ ನೇತೃತ್ವದ ತಂಡಗಳು ಪರಿಶೀಲಿಸಲಿವೆ. ತನಿಖೆ ನಡೆಸಿ, ಅ. 19ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅತಿ ಹೆಚ್ಚು ಸಾಮಗ್ರಿ ವೆಚ್ಚ ಭರಿಸಿದ ಗ್ರಾಮ ಪಂಚಾಯ್ತಿಗಳು

* ಬೆಳಗಾವಿ ತಾಲ್ಲೂಕು: ಬಾಳೇಕುಂದ್ರಿ ಬಿ.ಕೆ., ಹಿರೇಬಾಗೇವಾಡಿ, ಪೀರನವಾಡಿ, ಹಿಂಡಲಗಾ, ಕಲಕಾಂಬ

* ಖಾನಾಪುರ: ಗೋಲ್ಯಾಳಿ, ಪಾರವಾಡ

* ಚಿಕ್ಕೋಡಿ: ಹುನ್ನರಗಿ, ಶಿರದವಾಡ, ಜತ್ರಾಟ, ಹತ್ತರವಾಟ, ಇಂಗಳಿ

* ಹುಕ್ಕೇರಿ: ಕೋಟ, ಶಿರಡಾಣ, ಇಟ್ನಿ

* ರಾಮದುರ್ಗ: ನಂದಿಹಳ್ಳಿ, ಚಿಪ್ಪಲಕಟ್ಟಿ, ಚಿಂಚನೂರ, ಹೊಸಕೋಟಿ, ಬಟಕುರ್ಕಿ, ಇಡಗಲ್, ಗೊಡಚಿ

* ಸವದತ್ತಿ: ಅರಟಗಲ್, ಅಸುಂಡಿ

* ಗೋಕಾಕ: ತಳಕಟನಾಳ, ಧುಪದಾಳ

* ಅಥಣಿ: ಶಿರಗುಪ್ಪಿ

* ರಾಯಬಾಗ: ನಿಡಗುಂದಿ, ನಸಲಾಪುರ, ಕುಡಚಿ (ಗ್ರಾಮೀಣ).

*
ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ತನಿಖೆ ನಡೆಸಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಡಾ.ಕೆ.ವಿ. ರಾಜೇಂದ್ರ, ಸಿಇಒ, ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.