
ಹಾರೂಗೇರಿ: ‘ಕುಡಚಿ ಮತಕ್ಷೇತ್ರಕ್ಕೆ ನೀರಾವರಿ ಯೋಜನೆಯನ್ನು ತರುವ ಮೂಲಕ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ರೈತ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ’ ಎಂದು ಕುಂಚನೂರಿನ ಮಾಧುಲಿಂಗ ಮಹಾರಾಜರು ಹೇಳಿದರು.
ಕರೆಸಿದ್ದೇಶ್ವರ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಹಾರೂಗೇರಿ ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಹೆತ್ತ ತಂದೆ–ತಾಯಿಯ ಋಣ ತೀರಿಸಬೇಕು. ಶಾಸಕರು ನೀರಾವರಿ ಯೋಜನೆ ತರುವ ಮೂಲಕ ಕ್ಷೇತ್ರದ ಜನರ ಋಣ ತೀರಿಸಿದ್ದಾರೆ’ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಮಾತನಾಡಿ, ‘ಗುರ್ಲಾಪುರ ಕ್ರಾಸ್ ನಡೆದ ರೈತರ ಹೋರಾಟಕ್ಕೆ ₹50 ಸಾವಿರ ದೇಣಿಗೆ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತ ಏಕೈಕ ಶಾಸಕ ಮಹೇಂದ್ರ ಅವರು. ಮಾಜಿ ಸಚಿವ ವಿ.ಎಲ್.ಪಾಟೀಲ ಅವರು ಈ ಭಾಗದಲ್ಲಿ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಿದ ನೀರಾವರಿ ಹರಿಕಾರರು. ಅವರಂತೆ ಜನಸಾಮಾನ್ಯರ ಜೊತೆಗೆ ಸಾಮಾನ್ಯರಾಗಿ ಕ್ರಿಯಾಶೀಲತೆಯ ಶಾಸಕ ತಮ್ಮಣ್ಣವರ’ ಎಂದರು.
ಶಾಸಕ ಮಹೇಂದ್ರ ತಮ್ಮಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಗಳಖೋಡ ಜಿಡಗಾ ಮಠದ ಬಸವರಾಜೇಂದ್ರ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ, ಹಡಗಿನಾಳ ಮುತ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಇದಕ್ಕೂ ಮೊದಲು ಮಹೇಂದ್ರ ತಮ್ಮಣ್ಣವರ ಹಾಗೂ ಪತ್ನಿ, ಕಾರ್ಯಕರ್ತರು ಅಲಖನೂರಿನ ಕರೆಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಮುಗಳಖೋಡ, ಹಾರೂಗೇರಿ ಪುರಸಭೆ ಸದಸ್ಯರು ವಿವಿಧ ಹಳ್ಳಿಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ನೀರಾವರಿ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೇಬುಹಣ್ಣಿನ ಹಾರ ಹಾಕಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮಣ್ಣವರ ಕ್ಷೇತ್ರದ ಜನರು ವಿಶ್ವಾಸವಿಟ್ಟು ನನ್ನನು ಆಯ್ಕೆ ಮಾಡಿ ಶಾಸಕನನ್ನಾಗಿ ಮಾಡಿದ್ದಕ್ಕೆ ಋಣಿ. ಈ ಯೋಜನೆಯಿಂದ ಮತಕ್ಷೇತ್ರದ ಜನರ ಗೆಲುವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.