
ರಾಹುಲ್ ಗಾಂಧಿ
ಬೆಳಗಾವಿ: ‘ದೆಹಲಿಯಲ್ಲಿ ಈಚೆಗೆ ನಡೆದ ಕೃತಕ ಬುದ್ಧಿಮತ್ತೆ (ಎಐ) ಶೃಂಗಸಭೆ ಅತ್ಯಂತ ಯಶಸ್ವಿಯಾಗಿದೆ. ಜಗತ್ತಿನ ಪ್ರಮುಖ ಎಐ ಪರಿಣತರು, ಸಿಇಒಗಳು ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಬಹುಪಾಲು ದೇಶಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಇದನ್ನು ಸಹಿಸಿಕೊಳ್ಳದ ರಾಹುಲ್ ಗಾಂಧಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಬುದ್ಧಿಹೀನರಂತೆ ವರ್ತಿಸುತ್ತಿದ್ದಾರೆ. ಸದನದಲ್ಲಿ ಹೇಗೆ ಇರಬೇಕು, ಏನು ಚರ್ಚೆ ಮಾಡಬೇಕು ಎಂಬುದರ ತಯಾರಿ ಇಲ್ಲದೇ ಬರುತ್ತಾರೆ. ಬೀದಿ ಉಡಾಳನಂತೆ ಇರುವ ಅವರ ವರ್ತನೆಯಿಂದ ಕಾಂಗ್ರೆಸ್ ಸಂಸದರಿಗೂ ಬೇಸರ ಉಂಟಾಗಿದೆ’ ಎಂದರು.
‘ಎಐ ಸಮ್ಮೇಳನದಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ. ಅದನ್ನು ಸಹಿಸಿಕೊಳ್ಳಲು ರಾಹುಲ್ ಗಾಂಧಿಗೆ ಆಗುತ್ತಿಲ್ಲ. ವಿದೇಶಕ್ಕೆ ಹೋದಾಗ ಭಾರತ ಮತ್ತು ಮೋದಿ ವಿರುದ್ಧ ಟೀಕೆ ಮಾಡುವ ರೂಢಿ ಇಟ್ಟುಕೊಂಡಿದ್ದಾರೆ’ ಎಂದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಭೆ ಹೆಚ್ಚಾಗುತ್ತದೆ. ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಮುಸ್ಲಿಂ ತುಷ್ಟೀಕರಣ ರಾಜಕಾರಣವೇ ಇದಕ್ಕೆ ಕಾರಣ’ ಎಂದೂ ಆರೋಪಿಸಿದರು.
‘ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತರ ಬಲೆಗೆ ಬಿದ್ದ ವಿಚಾರದಲ್ಲಿ ನಾನು ಸರಿ– ತಪ್ಪು ಎಂಬ ಸರ್ಟಿಫಿಕೇಟ್ ಕೊಡುವುದಿಲ್ಲ. ಆದರೆ, ಕಾಂಗ್ರೆಸ್ಸಿಗರು ಹೊಂಚು ಹಾಕಿ ಇದನ್ನು ಮಾಡಿದ ಅನುಮಾನವಿದೆ. ಈ ಹಿಂದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಸಂಪಂಗಿ ಅವರೂ ದಲಿತ ಶಾಸಕ. ರಾಜ್ಯದಲ್ಲಿ ದಲಿತ ಶಾಸಕರನ್ನು ಟಾರ್ಗೆಟ್ ಮಾಡಿದ್ದು ಸ್ಪಷ್ಟವಾಗುತ್ತಿದೆ’ ಎಂದು ಶೆಟ್ಟರ್ ಅನುಮಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕುರುಬ ಸಿ.ಎಂ ಅಲ್ಲ: ‘ನಾನು ಕುರಿಗಾಹಿ ಎಂಬ ಕಾರಣಕ್ಕೆ ಷಡ್ಯಂತ್ರ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಬರೆದಿದ್ದಾರೆ. ಅವರು ಕುರುಬ ಸಿ.ಎಂ ಅಲ್ಲ. ರಾಜ್ಯದ ಎಲ್ಲ ಜನರ ಸಿ.ಎಂ. ಜಾತಿ ಸಂಕೋಲೆಯಿಂದ ಹೊರಬರಬೇಕು’ ಎಂದೂ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.