ADVERTISEMENT

ಜೈನ ಮುನಿ ಕೊಲೆ ಆರೋಪಿಗಳಿಗೆ ಗಲ್ಲುಶಿಕ್ಷೆ ಕೊಡಿಸಿ: ವೀಣಾ ಪಟ್ಟಣಕೋಡಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 8:30 IST
Last Updated 8 ಜುಲೈ 2023, 8:30 IST
ವೀಣಾ ಪಟ್ಟಣಕೋಡಿ
ವೀಣಾ ಪಟ್ಟಣಕೋಡಿ   

ಕಟಕಬಾವಿ (ಬೆಳಗಾವಿ ಜಿಲ್ಲೆ): 'ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಶಾಂತಿಪ್ರಿಯರಾಗಿದ್ದರು. ಧರ್ಮಕ್ಕಾಗಿ ಸರ್ವಸ್ವ ತ್ಯಾಗ ಮಾಡಿದವರು. ಸಲ್ಲೇಖನ ಅಥವಾ ಸಮಾಧಿ ಸ್ಥಿತಿಯ ಮೂಲಕ ಅವರು ಪ್ರಾಣ ಬಿಡಲು ಬಯಸಿದವರು. ಅಂಥವರನ್ನು ಅಮಾನುಷವಾಗಿ ಕೊಲೆ ಮಾಡಿದ್ದು ಸಮಾಜವನ್ನು ದಿಗಿಲುಗೊಳಿಸಿದೆ' ಎಂದು ಜೈನ ಸಮಾಜದ ಮುಖಂಡರಾದ ವೀಣಾ ಪಟ್ಟಣಕೋಡಿ ಹೇಳಿದರು.

ರಾಯಬಾಗ ತಾಲ್ಲೂಕಿನ ಕಟಕಬಾವಿ ಹೊಲದಲ್ಲಿ ಮುನಿ ಅವರ ಶವಕ್ಕಾಗಿ ಹುಡುಕಾಟದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, '15 ವರ್ಷಗಳಿಂದ ಹಿರೇಕೋಡಿ ಆಶ್ರಮದ ಜವಾಬ್ದಾರಿ ವಹಿಸಿಕೊಂಡಿದ್ದ ಕಾಮಕುಮಾರ ಮಹಾರಾಜ ಅವರು, ಸರ್ವಧರ್ಮಗಳನ್ನೂ ಗೌರವಿಸುತ್ತಿದ್ದರು. ಆಶ್ರಮದಲ್ಲಿ ಅನ್ಯಧರ್ಮದ ವ್ಯಕ್ತಿಗಳಿಗೂ ಕೆಲಸ ನೀಡಿದ್ದರು. ಆದರೆ ಆರೋಪಿಗಳು ಅವರ ಒಳ್ಳೆಯತನವನ್ನೇ ದೂರುಪಯೋಗ ಮಾಡಿಕೊಂಡಿದ್ದಾರೆ. ಮುನಿ ಅವರು ಸಹಾಯ ಮಾಡಿದ್ದರ ಪ್ರತಿಯಾಗಿ ಅವರ ಜೀವ ತೆಗೆದಿದ್ದಾರೆ. ಇದು ಅತ್ಯಂತ ಕ್ರೂರ ಮನಸ್ಥಿತಿಯ ವ್ಯಕ್ತಿಯ ಕೃತ್ಯ. ಯಾವುದೇ ಧರ್ಮದ ಯಾವುದೇ ಸನ್ಯಾಸಿಗಳಿಗೂ ಈ ರೀತಿಯ ಅನ್ಯಾಯ ಆಗಬಾರದು. ಪ್ರಕರಣವನ್ನು ಪೂರ್ಣ ತನಿಖೆ ಮಾಡಿ, ಆರೋಪಿಗೆ ಗಲ್ಲುಶಿಕ್ಷೆ ಆಗುವಂತೆ ಮಾಡಬೇಕು' ಎಂದರು.

'ಆರೋಪಿಗಳು ಮುನಿ ಅವರ ದೇಹವನ್ನು ಕತ್ತರಿಸಿ ಕೊಳವೆಬಾವಿಯಲ್ಲಿ ಮುಚ್ಚಿದ್ದಾಗಿ ಹೇಳಿದ್ದಾರಂತೆ. ಇದರಿಂದ ಮುನಿ ಅವರ ಅಂತ್ಯಸಂಸ್ಕಾರ ಹೇಗೆ ಮಾಡಬೇಕು ಎಂಬ ಚಿಂತೆ ಸಮಾಜವನ್ನು ಕಾಡುತ್ತಿದೆ. ಮಹಾರಾಷ್ಟ್ರದ ನಾಂದಣಿಯ ಭಟ್ಟಾರಕ ಮಹಾರಾಜರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆಯಲಾಗುವುದು' ಎಂದರು.

ADVERTISEMENT

ಮುನಿ ಅವರ ಪೂರ್ವಾಶ್ರಮದ ಸಂಬಂಧಿ ಪ್ರದೀಪ ನಂದಗಾಂವ ಮಾತನಾಡಿ, 'ಜುಲೈ 5ರಂದು ಮಹಾರಾಜರು ಕಾಣೆಯಾಗಿದ್ದರು. ಕೊಲೆ ಆರೋಪಿ ಕೂಡ ನಮ್ಮೊಂದಿಗೆ ಬಂದು ಹುಡುಕಾಡುವ ನಾಟಕ ಮಾಡಿದ್ದ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.