ADVERTISEMENT

‘ಲಂಚಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಹೋರಾಟ’–ಅರವಿಂದ ಕೆ.ಬಿ.

​ಪ್ರಜಾವಾಣಿ ವಾರ್ತೆ
Published 5 ಮೇ 2022, 7:29 IST
Last Updated 5 ಮೇ 2022, 7:29 IST

ಬೆಳಗಾವಿ: ‘ಲಂಚಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ನಾವು ತಳಮಟ್ಟದಿಂದ ಹೋರಾಟ ನಡೆಸುತ್ತಿದ್ದೇವೆ. ವಾರದಲ್ಲೊಂದು ದಿನ ಸರ್ಕಾರಿ ಕಚೇರಿಗಳ ಮುಂದೆ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕೆ.ಬಿ. ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರ್ಕಾರಕ್ಕೆ ಆಡಳಿತ ಯಂತ್ರದ ಮೇಲೆ ಹಿಡಿತವಿಲ್ಲದಂತಾಗಿದೆ. ವಿವಿಧ ಕೆಲಸಗಳಿಗಾಗಿ ಜನರು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಏಜೆಂಟರಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ’ ಎಂದು ದೂರಿದರು.

‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದು ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್‌ ಕಚೇರಿ, ತಾ.ಪಂ. ಇಒಗಳ ಕಚೇರಿ, ಉಪನೋಂದಣಿ ಕಚೇರಿಗಳ ಎದುರು ವಾರದಲ್ಲೊಂದು ದಿನ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದೇವೆ. ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ ಪರಿಸ್ಥಿತಿ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಉತ್ತಮ ನಾಡು ಕಟ್ಟಲು ಕರ್ನಾಟಕ ಜನಚೈತನ್ಯ ಯಾತ್ರೆ ಆರಂಭಿಸಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಇದು ಸಂಚರಿಸುತ್ತಿದೆ’ ಎಂದರು.

ಪಕ್ಷದ ಮುಖಂಡರಾದ ಬಿ.ಜಿ. ಕುಂಬಾರ, ಶಿವಾನಂದ ದೇಸಾಯಿ, ಯಲ್ಲಪ್ಪ ಕಲ್ಲಕುಟ್ರಿ, ಅಣ್ಣಪ್ಪ ಜಕ್ಕಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.