ಬೆಳಗಾವಿ: ‘ಸಿಇಟಿ ಬರೆಯಲು ಹೋದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದರೆ ಸುಮ್ಮನೇ ಇರಬೇಕೆ? ಜನಿವಾರ ಕತ್ತರಿಸಿದವರ ಕೈ ಕತ್ತಿಸಿದರೆ ಸರ್ಕಾರ ಸುಮ್ಮನೆ ಇರುತ್ತದೆಯೇ?’ ಎಂದು ಶಾಸಕ ಅಭಯ ಪಾಟೀಲ ಕಿಡಿ ಕಾರಿದರು.
ಜನಿವಾರ ಕತ್ತಿರಿಸಿದ ಘಟನೆ ಖಂಡಿಸಿ ಬ್ರಾಹ್ಮಣ ಸಮಾಜದಿಂದ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಕಾಳಜಿ ತೋರಿಸಿದೆ. ಆದರೆ, ಜನಿವಾರದ ವಿಚಾರದಲ್ಲಿ ಏಕೆ ಮೌನವಾಗಿದೆ? ಈ ಧೋರಣೆ ನೋಡಿದರೆ ಕೃತ್ಯದ ಹಿಂದೆ ಸರ್ಕಾರದ ಕೈವಾಡ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ಆರೋಪಿಸಿದರು.
ಸಮಾಜದ ಮುಖಂಡ ಅನಿಲ ಪೋತದಾರ ಮಾತನಾಡಿ, ‘ಇಂಥ ಘಟನೆ ಮರುಕಳಿಸಿದರೆ ಬ್ರಾಹ್ಮಣರು ಪರಶುರಾಮನ ಅವತಾರ ತಾಳಬೇಕಾಗುತ್ತದೆ. ಜನಿವಾರಕ್ಕೆ ಕೈ ಹಾಕಿದರೆ ತಲವಾರ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ರಾಣಿ ಚನ್ನಮ್ಮ ವೃತ್ತದಲ್ಲಿ ಒಂದು ತಾಸು ಮಾನವ ಸರಪಳಿ ನಿರ್ಮಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜನಿವಾರ ಕೈಯಲ್ಲಿ ಹಿಡಿದುಕೊಂಡು ಧರಣಿ ಕೂಡ ಮಾಡಿದರು.
ಕೃಷ್ಣ ಮಠದ ಆಚಾರ್ಯ ಶ್ರೀನಿವಾಸ ಹೊನ್ನಿದಿಬ್ಬ, ಸಮೀರ್ ಆಚಾರ್ಯ, ಗುರುರಾಜ್ ಆಚಾರ್ಯ, ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ, ಆರ್.ಎಸ್ ಮುತಾಲಿಕ ದೇಸಾಯಿ, ಎಕೆಬಿಎಂಎಸ್‌ನ ಜಿಲ್ಲಾ ಪ್ರತಿನಿಧಿ ಅಕ್ಷಯ ಕುಲಕರ್ಣಿ, ಅಶೋಕ್ ದೇಶಪಾಂಡೆ, ಅನುಶ್ರೀ ದೇಶಪಾಂಡೆ ನೇತೃತ್ವ ವಹಿಸಿದ್ದರು.
ಬೆಳಗಾವಿ: ‘ಜನಿವಾರ ತೆಗೆಸಿದ ವಿಚಾರವನ್ನು ಬಿಜೆಪಿಯವರು ಅನಗತ್ಯವಾಗಿ ದೊಡ್ಡದು ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ಪ್ರತಿಭಟನೆ ಮಾಡಿದ್ದಾರೆ. ಬೇರೆ ಯಾರಿಗಾದರೂ ಇಂಥದ್ದು ಆಗಿದ್ದರೆ ಬಾಯಿ ಬಿಡುತ್ತಿರಲಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ; ಶಾಸಕ ಅಭಯ ಪಾಟೀಲ ಅವರನ್ನು ಟೀಕಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ‘ಹಿಜಾಬ್ ವಿವಾದವೇ ಬೇರೆ ಜನಿವಾರ ವಿಷಯವೇ ಬೇರೆ. ಅದು ಆಕಸ್ಮಿಕವಾಗಿ ನಡೆದಿತ್ತು. ಎರಡನ್ನೂ ಹೋಲಿಕೆ ಮಾಡಲು ಆಗುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ. ಆದರೆ, ಘಟನೆಗೂ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.