ADVERTISEMENT

 ಜೇವರ್ಗಿ–ಸಂಕೇಶ್ವರ ಹೆದ್ದಾರಿ ಕಾಮಗಾರಿ ಶೀಘ್ರ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:01 IST
Last Updated 23 ಜನವರಿ 2020, 16:01 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಅಥಣಿ: ‘ಜೇವರ್ಗಿ–ಸಂಕೇಶ್ವರ ಹೆದ್ದಾರಿ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೂ ಚರ್ಚಿಸಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘2018ರಲ್ಲೇ ಯೋಜನೆಗೆ ಚಾಲನೆ ನೀಡಲಾಗಿದೆ. ಹಿಂದಿನ ಸರ್ಕಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮನ್ವಯದ ಕೊರತೆ ಇದ್ದಿದ್ದರಿಂದ ಚಾಲನೆ ಸಿಕ್ಕಿರಲಿಲ್ಲ. ಈಗ ಎರಡೂ ಸರ್ಕಾರಗಳು ಒಂದೇ ಆಗಿರುವುದರಿಂದ ಅನುದಾನದ ಕೊರತೆ ಆಗುವುದಿಲ್ಲ. ₹ 840 ಕೋಟಿ ಅನುದಾನ ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪಟ್ಟಣದಲ್ಲಿ ಎ.ಆರ್.ಟಿ.ಒ. ಕಚೇರಿ ಸದ್ಯದಲ್ಲೇ ಪ್ರಾರಂಭವಾಗಲಿದೆ. ವಾಹನಗಳ ನೋಂದಣಿಗಾಗಿ ತಾಲ್ಲೂಕಿನವರು ಚಿಕ್ಕೋಡಿಗೆ ಹೋಗಬೇಕಾಗಿತ್ತು. ಇದರಿಂದ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿ ಕಚೇರಿ ಮಂಜೂರು ಮಾಡಿಸಿದ್ದೇನೆ. ಇದಕ್ಕೆ ಅಥಣಿ, ಕಾಗವಾಡ ಹಾಗೂ ರಾಯಬಾಗ ತಾಲ್ಲೂಕುಗಳ ವ್ಯಾಪ್ತಿ ನಿಗದಿಗೆ ಉದ್ದೇಶಿಸಲಾಗಿತ್ತು. ರಾಯಬಾಗದವರು ವಿರೋಧ ವ್ಯಕ್ತಪಡಿಸಿದ್ದರಿಂದ, ಆ ತಾಲ್ಲೂಕನ್ನು ಚಿಕ್ಕೋಡಿ ಆರ್‌ಟಿಒ ಕಚೇರಿ ವ್ಯಾಪ್ತಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲ್ಲಿನ ಕಚೇರಿಗೆ ಅಥಣಿ ಮತ್ತು ಕಾಗವಾಡ ತಾಲ್ಲೂಕುಗಳು ಒಳಪಡಲಿವೆ. ರಾಯಬಾಗದವರು ಇಲ್ಲೂ ನೋಂದಣಿಗೆ ಅವಕಾಶ ಇರಲಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಮ್ಮಲ್ಲಿ ವಾಹನಗಳ ನೋಂದಣಿ ತೆರಿಗೆ ಪ್ರಮಾಣ ಜಾಸ್ತಿ ಇದೆ. ಹೀಗಾಗಿ, ಇಲ್ಲಿನವರು ತೆರಿಗೆ ಕಡಿಮೆ ಇರುವ ಪಾಂಡಿಚೇರಿ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಗಿ ನೋಂದಣಿ ಮಾಡಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಆ ವಾಹನಗಳ ತೆರಿಗೆ ನಮ್ಮ ರಾಜ್ಯಕ್ಕೆ ಬರುತ್ತಿಲ್ಲ. ಒಂದು ದೇಶ ಒಂದು ತೆರಿಗೆ ಯೋಜನೆಯನ್ನು ಕೇಂದ್ರ ಈಗಾಗಲೇ ಜಾರಿಗೆ ತಂದಿದೆ. ಎಲ್ಲ ರಾಜ್ಯದಲ್ಲೂ ಇದು ಅನುಷ್ಠಾನಗೊಂಡರೆ, ಬೇರೆ ರಾಜ್ಯಗಳ ಪಾಲಾಗುವ ತೆರಿಗೆ ನಮ್ಮ ರಾಜ್ಯದಲ್ಲಿಯೇ ಉಳಿಯಲಿದೆ’ ಎಂದರು.

‘ಕೊಕಟನೂರ ಹತ್ತಿರ 100 ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಪ್ರಾರಂಭಿಸುವ ಯೋಜನೆಗೆ ಒಪ್ಪಿಗೆ ದೊರೆತಿದೆ. ಭಾವುರಾವ್ ದೇಶಪಾಂಡೆ ಪಶುವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಮುಂದಿನ ವರ್ಷ ತರಗತಿಗಳನ್ನು ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

‘ಪಟ್ಟಣದ ಕರೆ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.