ADVERTISEMENT

ಬೆಳಗಾವಿ: 'ಇಲ್ಲಿ ಕಾಣಿಸಿದ್ದು ಚಿರತೆಯಲ್ಲ, ಕಾಡು ಬೆಕ್ಕು'

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:23 IST
Last Updated 4 ಜುಲೈ 2021, 7:23 IST
ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಾಡು ಬೆಕ್ಕಿನ ಚಿತ್ರ
ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಾಡು ಬೆಕ್ಕಿನ ಚಿತ್ರ   

ಬೆಳಗಾವಿ: ‘ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ಗಾಲ್ಫ್ ಕೋರ್ಸ್‌ ಮೈದಾನದ ಬಳಿ ಗುರುವಾರ ಮುಂಜಾನೆ ವಾಯುವಿಹಾರಿಗಳಿಗೆ ಕಾಣಿಸಿಕೊಂಡಿದ್ದು ಚಿರತೆಯಲ್ಲ; ಅದು ದೊಡ್ಡ ಕಾಡು ಬೆಕ್ಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಆ ಭಾಗದ ಜನರಲ್ಲಿ ಉಂಟಾಗಿದ್ದ ಆತಂಕ ದೂರಾದಂತಾಗಿದೆ.

‘ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಿಗದಿತ ಪ್ರದೇಶದಲ್ಲಿ ಅಂದು ಬೆಳಿಗ್ಗೆಯಿಂದ ಸಂಜೆವರೆಗೂ ಪರಿಶೀಲನೆ ನಡೆಸಲಾಗಿತ್ತು. ಸಂಜೆ ಎರಡು ಕಡೆಗಳಲ್ಲಿ ಕುರಿ ಮತ್ತು ನಾಯಿ ಇದ್ದ ಬೋನುಗಳನ್ನು ಇಡಲಾಗಿತ್ತು. 5 ಕಡೆಗಳಲ್ಲಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿತ್ತು. ಗಾಲ್ಫ್‌ ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಗಮನಿಸಿದಾಗ, ಆ ಭಾಗದಲ್ಲಿ ಕಾಡು ಬೆಕ್ಕು ಸಂಚರಿಸಿರುವುದು ಕಂಡುಬಂದಿದೆ. ಅದನ್ನು ದೃಢಪಡಿಸಿಕೊಳ್ಳಲಾಗಿದೆ’ಎಂದು ಆರ್‌ಎಫ್ಒ ಶಿವಾನಂದ ಮಗದುಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಕೂಡ ಕಂಡುಬಂದಿಲ್ಲ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದರು.

ADVERTISEMENT

ಡಿಸಿಎಫ್ ಹರ್ಷಬಾನು, ಎಸಿಎಫ್ ಎಂ.ಬಿ. ಕುಸನಾಳ, ಆರ್‌ಎಫ್‌ಒಗಳಾದ ಶಿವಾನಂದ ಮಗದುಮ್‌ ಮತ್ತು ನಾಗರಾಜ ಭೀಮಗೋಳ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.