ADVERTISEMENT

ಸುಲಭ ಶೌಚಾಲಯಗಳಿಗೆ ಮೋದಿ ಹೆಸರಿಡಬೇಕು ಎಂದಿದ್ದು ನನಗೆ ಸಿಟ್ಟು ತರಿಸಿತು: ಕೆಎಸ್‌ಇ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 16:13 IST
Last Updated 10 ಆಗಸ್ಟ್ 2021, 16:13 IST
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ   

ಬೆಳಗಾವಿ: ‘ಸುಲಭ ಶೌಚಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಯಿಂದ ನನಗೆ ಸಿಟ್ಟು ಬಂತು. ಅದರ ಭರದಲ್ಲಿ ‘ಆ ಪದ’ ಬಳಸಿದ್ದು ತಪ್ಪೇ. ಕೂಡಲೇ ಆ ಮಾತನ್ನು ಹಿಂಪಡೆದಿದ್ದೇನೆ’ ಎಂದು ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹರಿಪ್ರಸಾದ್ ಹೇಳಿಕೆಯನ್ನು ಕಾಂಗ್ರೆಸ್‌ನವರು ಒಪ್ಪುತ್ತಾರೆಯೇ?’ ಎಂದು ಕೇಳಿದರು.

‘ನನ್ನ ವಿರುದ್ಧ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರೆ ನಡೆಸಲಿ ಬಿಡಿ. ರಾಜಕಾರಣ ಮಾಡುವುದಕ್ಕಾಗಿಯೇ ಅವರು ಕಾಯುತ್ತಿದ್ದರು. ನನ್ನ ಮಾತಿಗೆ ಒಮ್ಮೆ ಕ್ಷಮೆ ಕೇಳಿಯಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಅದನ್ನೇ ಮಾಡುತ್ತಾ ಕೂರಲೇ’ ಎಂದರು.

ADVERTISEMENT

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಹಳ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರೇಕೆ?’ ಎಂದು ಕೇಳಿದರು.

‘ರಾಜ್ಯದ ಜನರು ಬಿಜೆಪಿ ಸಂಪೂರ್ಣ ಅಧಿಕಾರವನ್ನು ಎಂದೂ ಕೊಡಲಿಲ್ಲ. ಆದರೆ, ಆಡಳಿತ ಮಾಡಿ ಎಂದಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. 224 ಕ್ಷೇತ್ರಗಳಲ್ಲೂ ಸಂಘಟನೆ ಮಾಡುತ್ತಿದ್ದೇವೆ. ಸಂಘಟನೆಯ ಶಕ್ತಿ ಮೇಲೆಯೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.

‘ಗ್ರಾಮೀಣ ರಸ್ತೆಗಳು ಹಾಳಾಗಿರುವ ಬಗ್ಗೆ ವರದಿ ಪಡೆದು ಮುಖ್ಯಮಂತ್ರಿ ಜೊತೆ ಚರ್ಚಿಸಿ, ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಸಂತ್ರಸ್ತರಿಗೆ ಪರಿಹಾರ ಕೊಡಲು ಕ್ರಮ ವಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.