ADVERTISEMENT

ಕಾಗವಾಡ: 51 ಸತ್ಯ ಸಿದ್ಧರ ಭೇಟಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:22 IST
Last Updated 10 ನವೆಂಬರ್ 2025, 2:22 IST
ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ 51 ಸತ್ಯ ಸಿದ್ಧರ ಭೇಟಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು
ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ 51 ಸತ್ಯ ಸಿದ್ಧರ ಭೇಟಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು   

ಕಾಗವಾಡ: ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿ ತಾಲ್ಲೂಕಿನ ಐನಾಪುರ ಪಟ್ಟಣದ ಕವಲಿಮಡಿಯ ಬನ್ನಿ ಮಂಟಪ ಮೈದಾನದಲ್ಲಿ ಕೇರಿ ಸಿದ್ಧೇಶ್ವರ ಭಂಡಾರ ಜಾತ್ರೆ ಪೌಳಿ ವಾಸ್ತುಶಾಂತಿ ಹಾಗೂ ಲಕ್ಷ ದೀಪೋತ್ಸವ ನಿಮಿತ್ತ ನಡೆದ ಮೊದಲ ದಿನದ ಕಾರ್ಯಕ್ರಮದಲ್ಲಿ 51 ಸತ್ಯ ಸಿದ್ಧರ ಭೇಟಿ ಅದ್ದೂರಿಯಾಗಿ ನಡೆಯಿತು.

ರಾಜ್ಯ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ಭಂಡಾರದಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುಳಕಿತರಾದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆ, ಎತ್ತಿನಗಾಡಿ, ಟ್ರ್ಯಾಕ್ಟರ್‌ ಹಾಗೂ ಇತರೆ ವಾಹನಗಳ ಮೂಲಕ ಆಗಮಿಸಿದರು.

ಬಂದ ಭಕ್ತರು ಭಂಡಾರ ಎರಚಿ ಪಲ್ಲಕಿ ಭೇಟಿಯ ಕಾರ್ಯಕ್ರಮ ಕಣ್ತುಂಬಿಕೊಂಡರು ಸುಮಾರು ಐದು ಟನ್‌ನಷ್ಟು ಭಂಡಾರ ಅರ್ಪಿಸಿದ್ದರಿಂದ ನೂರು ಎಕರೆ ವಿಶಾಲ ಪ್ರದೇಶ ಭಂಡಾರಮಯವಾಗಿತ್ತು. ದೇವರ ಸ್ಪರ್ಶದ ಪ್ರಸಾದ ರೂಪದ ಭಂಡಾರವನ್ನು ಭಕ್ತರು ಮನೆಗೆ ಒಯ್ಯುತ್ತಾರೆ‌. ರೈತರು ತಮ್ಮ ತೋಟದ ಬೆಳೆಗಳಿಗೆ, ಕೃಷಿ ಹೊಂಡಕ್ಕೆ, ಸಾಕು ಪ್ರಾಣಿಗಳಿಗೆ ಹಚ್ಚುತ್ತಾರೆ. ಈ ಭಂಡಾರದಿಂದ ಉತ್ತಮ ಆರೋಗ್ಯ, ಸಂಪತ್ತು ದೊರೆಯುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ.

ADVERTISEMENT

ಇಡೀ ರಾತ್ರಿ ಜಾಗರಣೆ: ಜಾತ್ರೆ ಅಂಗವಾಗಿ ಜಾಗರಣೆಗಾಗಿ ದೇವರ, ನಾಟಕ, ಡೊಳ್ಳಿನ ಹಾಡು ಇತರೆ ಮನರಂಜನೆ ಕಾರ್ಯಕ್ರಮಗಳು ಇರುವುದರಿಂದ ಭಕ್ತರು ಇಡೀ ರಾತ್ರಿ ಭಕ್ತಿಯ ಭಾವದಲ್ಲಿ ತೇಲಿ ಜಾಗರಣೆ ಮಾಡಿದರು.

ಅನ್ನಪ್ರಸಾದ: ಭೇಟಿಗೆ ಬರುವ ಲಕ್ಷಾಂತರ ಭಕ್ತರಿಗೆ ವೆವ್ಯಸ್ಥಿತವಾದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಐನಾಪುರ ಕೇರಿ ಸಿದ್ಧೇಶ್ವರ, ಮೋಳೆ ಓಘಸಿದ, ಬೇವರಗಿ ಬಿಳ್ಳ್ಯಾನಿಸಿದ, ಗುರು ಸೋಮಲಿಂಗ ಇಂದಾಪುರ ಬಳೋಗಿಸಿದ್ದರ ಭೇಟಿ ಅತ್ಯಂತ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಿದ್ಧ ಬಳಗದ ಹಲವು ಮಹಾಸ್ವಾಮಿಗಳು ಭಂಡಾರ ಜಾತ್ರೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.