
ಕಾಗವಾಡ: ಸುತ್ತಲೂ ಶುಭಾಶಯದ ಕಮಾನುಗಳು, ಬೃಹತ್ ಶಾಮಿಯಾನ, ರುಚಿಕರ ಭೋಜನ, ಬಾನಂಗಳಲ್ಲಿ ಬಾಣ– ಬಿರುಸುಗಳ ಚಿತ್ತಾರ, ಪಟಾಕಿ ಸದ್ದು, ಡಿ.ಜೆ. ಸಂಗೀತಕ್ಕೆ ಹುಚ್ಚೆದ್ದು ಕುಣಿದ ಯುವಪಡೆ. ಇದೆಲ್ಲ ನೋಡಿ ಊರಲ್ಲಿ ಯಾವುದೋ ಜಾತ್ರೆ ಇದೆ ಎಂದುಕೊಳ್ಳಬೇಡಿ. ಇದು ಸಾಮಾನ್ಯ ರೈತನೊಬ್ಬ ತನ್ನ ಎತ್ತಿನ ಜನ್ಮದಿನಕ್ಕೆ ಮಾಡಿದ ಸಿದ್ಧತೆ!
ಕಾಗವಾಡ ಸಮೀದಪ ಸಂಬರಗಿ ಗ್ರಾಮದ ರೈತ ಉಮೇಶ ಶಿಂದೆ ಅವರು ತಮ್ಮ ಮನೆ ಮಗನಂತೆ ಸಾಕಿದ ‘ಚಂಡ’ ಎಂಬ ಎತ್ತಿನ ಮೂರನೇ ವರ್ಷದ ಜನ್ಮದಿನವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಿದರು.
ಎತ್ತಿಗೆ ಅಲಂಕಾರ ಮಾಡಿ, ಹೂ ಮಾಲೆಗಳಿಂದ ಸಿಂಗರಿಸಿ, ಕಂಬಳಿಯ ಮೇಲೆ ನಿಲ್ಲಿಸಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿದರು. ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಎತ್ತಿನ ಕಾಲಿಗೆ ನಮಸ್ಕರಿಸಿದರು. ಊರ ತುಂಬ ಎತ್ತಿನ ಮೆರವಣಿಗೆ ಮಾಡಿದರು. ಸಂಬರಗಿ ಮತ್ತು ಸುತ್ತಲಿನ ಹಳ್ಳಿಗಳಿಂದಲೂ ಜನ ಬಂದರು.
ಈ ಎತ್ತು ಮಹಾರಾಷ್ಟ್ರದಲ್ಲಿ ಆಯೋಜಿಸಿದ ಹಲವು ಓಟದ ಸ್ಪರ್ಧೆಗಳಲ್ಲಿ ಗೆದ್ದು, ರೈತನಿಗೆ ಹೆಸರು ತಂದುಕೊಟ್ಟಿದೆ. ಈ ಪ್ರೀತಿಗಾಗಿ ರೈತ ಜನ್ಮದಿನವನ್ನು ಸಡಗರದಿಂದ ಆಚರಿಸಿ, ಊರಿಗೆ ಭರ್ಜರಿ ಭೋಜನ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.