ADVERTISEMENT

ಬೆಳಗಾವಿ: ಪ್ರವಾಸಿಗರನ್ನು ಸೆಳೆಯುತ್ತಿರುವ ‘ಕಣಬರ್ಗಿ ಸಿದ್ದೇಶ್ವರ’

ನಗರದ ಸೆರಗಿನಲ್ಲೇ ಇರುವ ಆಕರ್ಷಕ ತಾಣ

ಎಂ.ಮಹೇಶ
Published 23 ಸೆಪ್ಟೆಂಬರ್ 2020, 20:00 IST
Last Updated 23 ಸೆಪ್ಟೆಂಬರ್ 2020, 20:00 IST
ಬೆಳಗಾವಿ ಹೊರವಲಯದ ಕಣಬರ್ಗಿಯಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಪ್ರಕೃತಿಯ ಸಿರಿ...ಪ್ರಜಾವಾಣಿ ಚಿತ್ರ
ಬೆಳಗಾವಿ ಹೊರವಲಯದ ಕಣಬರ್ಗಿಯಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಪ್ರಕೃತಿಯ ಸಿರಿ...ಪ್ರಜಾವಾಣಿ ಚಿತ್ರ   

ಬೆಳಗಾವಿ: ಹೊರವಲಯದ ಕಣಬರ್ಗಿ ಬಡಾವಣೆಯ ಸೆರಗಿನಲ್ಲಿ ಗುಡ್ಡದ ಮೇಲಿರುವ ಸಿದ್ದೇಶ್ವರ ದೇವಾಲಯದ ಆಕರ್ಷಕ ಪ್ರಕೃತಿ ಸಿರಿಯು ಭಕ್ತರೊಂದಿಗೆ ಪ್ರವಾಸಿಗರನ್ನೂ ಸೆಳೆಯುತ್ತಿದೆ.

ಗುಡ್ಡದಲ್ಲಿರುವ ಈ ತಾಣದಲ್ಲಿ ಹಲವು ದೇವಾಲಯಗಳಿವೆ. ಶಿಲಾಸ್ತರದ ಗವಿಯಲ್ಲಿರುವ ಸಿದ್ದೇಶ್ವರ ದೇವರೊಂದಿಗೆ ಮಾರುತಿ, ಗಣೇಶ, ಬ್ರಹ್ಮ, ಕೃಷ್ಣ, ರಾಮಲಿಂಗ, ಬಸವಣ್ಣ ಮೊದಲಾದ ದೇಗುಲಗಳಿವೆ. ಸುತ್ತಲೂ ಹಚ್ಚಹರಿಸಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಮಕ್ಕಳ ಆಟಕ್ಕೆ ಉದ್ಯಾನ ನಿರ್ಮಿಸಲಾಗಿದೆ.

ದೇವಾಲಯದ ಮೇಲಿಂದ ನಿಂತು ವೀಕ್ಷಿಸಿದರೆ, ನಗರದ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದು. ಈ ಕಾರಣದಿಂದಾಗಿಯೇ ದೇವಾಲಯವು ಇಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ವಿಶೇಷವಾಗಿ, ಯುವಕ–ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಕೊರೊನಾ ಸೋಂಕಿನ ಭೀತಿಯ ನಡುವೆಯೂ ಅಲ್ಲಿ ಪ್ರವಾಸಿ ಚಟುವಟಿಗಳು ಗರಿಗೆದರಿವೆ. ಅದರಲ್ಲೂ ವಾರಾಂತ್ಯದಲ್ಲಿಬಹಳಷ್ಟು ಮಂದಿ ಕುಟುಂಬ ಸಮೇತವಾಗಿ ಬಂದು, ದೇವರ ದರ್ಶನ ಪಡೆದು ನಿಸರ್ಗದ ಮಡಿಲಲ್ಲಿ ‘ಬುತ್ತಿ’ ಊಟ ಮಾಡುವುದು ಕೂಡ ಕಂಡುಬರುತ್ತದೆ.

ADVERTISEMENT

ಚಿಕ್ಕ ಗವಿಗಳು:ಅದರಲ್ಲೂ ಮಳೆಯ ಸಂದರ್ಭದಲ್ಲಿ ಗುಡ್ಡದ ಮೇಲಿಂದ ಧುಮ್ಮಿಕ್ಕುವ ಜಲಪಾತ ಈ ತಾಣದ ವಿಶೇಷಗಳಲ್ಲೊಂದು. ಚಿಕ್ಕ ಚಿಕ್ಕ ಗವಿಗಳು ಗಮನಸೆಳೆಯುತ್ತವೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರ ಮತ್ತು ಜಾಗಿಂಗ್‌ಗೆ ಪ್ರಶಸ್ತ ಸ್ಥಳವಾಗಿಯೂ ಗುರುತಿಸಿಕೊಂಡಿದೆ. ಮೇಲಿಂದ ಕಾಣುವ ಮನಮೋಹನ ಪರಿಸರದ ನೋಟವುಮೆಟ್ಟಿಲುಗಳನ್ನು ಹತ್ತಿ ಹೋದಾಗ ಆಗುವ ಆಯಾಸವನ್ನು ಮರೆಸುತ್ತದೆ.

‘ಬಂಡೆ ಮಧ್ಯದ ಗವಿಯಲ್ಲಿರುವ ಸಿದ್ದೇಶ್ವರನ ಬಗ್ಗೆ ಹಲವು ರೋಚಕ ಕಥೆಗಳಿವೆ. ಎಲ್ಲ ಧರ್ಮೀಯರೂ ಕೂಡ ನಡೆದುಕೊಳ್ಳುವುದು ವಿಶೇಷ. ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಮಹಾರಾಷ್ಟ್ರ ಹಾಗೂ ಗೋವಾದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಅಭಿವೃದ್ಧಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದು ಕುಟುಂಬ ಸಮೇತ ಪಿಕ್‌ನಿಕ್‌ಗೆ ಪ್ರಶಸ್ತ ಸ್ಥಳ ಎನಿಸಿದೆ’ ಎನ್ನುತ್ತಾರೆ ಕಣಬರ್ಗಿ ನಿವಾಸಿಗಳು.

ಎಲ್ಲರ ಸಹಕಾರದಿಂದ: ‘ಜನಪ್ರತಿನಿಧಿಗಳು, ಭಕ್ತರು ಹಾಗೂ ಸ್ಥಳೀಯರ ಸಹಕಾರದಿಂದ ದೇವಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತಿರುವುದರಿಂದ, ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಐತಿಹಾಸಿಕವಾದ ಈ ದೇವಾಲಯ ಭಕ್ತರ ಜಾಗೃತ ಕ್ಷೇತ್ರವಾಗಿ ಗುರುತಿಸಿಕೊಂಡಿದೆ’ ಎಂದು ಟ್ರಸ್ಟ್‌ನ ಮುಖಂಡ ಮಾರುತಿ ರೇವಣಸಿದ್ದಪ್ಪ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಈ ದೇವಾಲಯ ಬರುತ್ತದೆ. ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಶಾಸಕರಾಗಿದ್ದಾಗ ₹50 ಲಕ್ಷ ವೆಚ್ಚದಲ್ಲಿ ರಸ್ತೆ, ಉದ್ಯಾನ ಮತ್ತು ಇತರ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಮುಖಂಡ ಸಂಜಯ ಸುಂಟಕರ್‌ ಕಮಾನು ಮತ್ತು ಮೆಟ್ಟಿಲುಗಳನ್ನು ಹಾಗೂ ಹಿಂಡಾಲ್ಕೊ ಕಂಪನಿಯವರು ಮಹಾಪ್ರಸಾದದ ಶೆಡ್‌ಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ದೇವಸ್ಥಾನ ಟ್ರಸ್ಟ್‌ನವರು ಜೀರ್ಣೋದ್ಧಾರ ಹಾಗೂ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮತ್ತಷ್ಟು ಆಕರ್ಷಕಗೊಳಿಸುವ ಪ್ರಯತ್ನವೂ ನಡೆದಿದೆ.

ಮಕರ ಸಂಕ್ರಾಂತಿ, ಶಿವರಾತ್ರಿ, ಶ್ರಾವಣ, ದಸರಾ, ದೀಪಾವಳಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಪ್ರತಿ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.