ADVERTISEMENT

ರಾಯಬಾಗ: ‘ಬಸವ ತಾಲಿಬಾನಿಗಳು’ ಎಂದು ಟೀಕಿಸಿದ ಕನೇರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 18:07 IST
Last Updated 2 ಡಿಸೆಂಬರ್ 2025, 18:07 IST
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ   

ರಾಯಬಾಗ (ಬೆಳಗಾವಿ ಜಿಲ್ಲೆ): ‘ಹನುಮ ಮಾಲಾಧಾರಣೆ ಮಾಡಿ ಯುವಜನರನ್ನು ದುಶ್ಚಟಗಳಿಂದ ದೂರ ಇರುವಂತೆ ಮಾಡುತ್ತೇವೆ. ಈ ಸಂಪ್ರದಾಯ ಸಹಿಸದ ಕೆಲ ಬಸವ ತಾಲಿಬಾನಿಗಳು, ಕಮ್ಯುನಿಸ್ಟರು ಟೀಕಿಸುತ್ತಾರೆ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ರಾಯಬಾಗ ತಾಲ್ಲೂಕು ಘಟಕ ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ.

‘ಕೆಲ ಸ್ವಾಮೀಜಿಗಳು ನಮ್ಮ ಪದ್ಧತಿ ಸಹಿಸುವುದಿಲ್ಲ. ಆರ್‌ಎಸ್‌ಎಸ್‌ನವರು ಬಡಿಗೆ ಹಿಡಿದು ಏಕೆ ಅಡ್ಡಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುವವರ ವಿರುದ್ಧ ಬಡಿಗೆ ಹಿಡಿಯದೇ, ಆರತಿ ಎತ್ತಿ ಕರೆಯಬೇಕೆ?’ ಎಂದು ಪ್ರಶ್ನಿಸಿದರು.

ADVERTISEMENT

‘ಇಂಥವರಿಗೆ ಯಾವ ಭಾಷೆಯಲ್ಲಿ ಹೇಳಿದರೆ ತಿಳಿಯುತ್ತದೆಯೋ ಅಂಥದ್ದೇ ಭಾಷೆಯನ್ನು ಈಚೆಗೆ ಬಳಸಿದ್ದೇನೆ. ಅಲ್ಲಿಯವರೆಗೂ ಅವರಿಗೆ ತಿಳಿದಿರಲಿಲ್ಲ. ನಾನು ಬಳಸಿದ ‘ಆ ಭಾಷೆ’ ಬೇಗ ತಿಳಿಯಿತು. ಜನರೇ ಈಗ ಅವರನ್ನು ಚೀ– ಥೂ ಎಂದು ಉಗಿಯುತ್ತಿದ್ದಾರೆ’ ಎಂದರು.

‘ಕಮ್ಯುನಿಸ್ಟರು ಎಂದರೆ ದೇಶದ ಮೇಲೆ ಕಮ್ಮಿ–ನಿಷ್ಠೆ ಇರುವವರು. ಬರೀ ಚೀನಾ, ರಷ್ಯಾ ದೇಶಗಳ ಉದಾಹರಣೆ ಕೊಟ್ಟು ನಮ್ಮ ದೇಶದ ಯುವಜನರನ್ನು ಹಾಳು ಮಾಡುತ್ತಿದ್ದರು. ಈಗ ಅವರ ಉಪಟಳ ಕಡಿಮೆ ಆಗಿದೆ. ಕೆಲ ಕಾವಿಧಾರಿಗಳು ಶುರು ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.