
ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಬಸವಣ್ಣ ಹಿಂದೂ ಧರ್ಮ ವಿರೋಧಿಸಿಲ್ಲ. ಅನ್ಯ ಧರ್ಮಗಳನ್ನು ಕೀಳಾಗಿ ಕಂಡಿಲ್ಲ. ಬಸವ ಪರಂಪರೆಯ ಶೇ 3ರಷ್ಟು ಸ್ವಾಮೀಜಿಗಳು ಬಸವ ತತ್ವದ ಸಾರ ಹಾಳು ಮಾಡುತ್ತಿದ್ದಾರೆ’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರವಲಯದ ಅವಜೀಕರ ಆಶ್ರಮದಲ್ಲಿ ಬುಧವಾರ ಮಾತನಾಡಿದ ಅವರು, ‘ಕೆಲ ಸ್ವಾಮೀಜಿಗಳು ವಚನ ಸಾಹಿತ್ಯವೇ ಮೇಲು, ಇಷ್ಟಲಿಂಗವೇ ಅಂತಿಮ ಎಂಬ ಹೇಳಿಕೆ ನೀಡುತ್ತಿದ್ದಾರೆ. ಜನರಿಗೆ ಗುಡಿ ಗುಂಡಾರಗಳಿಗೆ ಹೋಗಬೇಡಿ ಎನ್ನುತ್ತಾರೆ. ಇದೆಲ್ಲವೂ ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಜಿಲ್ಲೆ ಪ್ರವೇಶಿಸದಂತೆ ನನ್ನನ್ನು ನಿರ್ಬಂಧಿಸಲಾಗುತ್ತಿದೆ. ರೌಡಿ ಶೀಟರ್ ರೀತಿ ನೋಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ವಿಜಯಪುರದ ಸಚಿವರೊಬ್ಬರು ಲಿಂಗಾಯತ ಧರ್ಮ ಮುಗಿಸಲಿಕ್ಕೆ ಹೊರಟಂತಿದೆ. ನನ್ನನ್ನು ಅನಗತ್ಯ ಗುರಿಪಡಿಸಲಾಗುತ್ತಿದೆ’ ಎಂದರು. ಸ್ವಾಮೀಜಿ ಆಶ್ರಮಕ್ಕೆ ಬರುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆಶ್ರಮದ ಅಧ್ಯಕ್ಷ ಮಲ್ಲಪ್ಪ ಮಹಾರಾಜ, ಅಭಿನವ ಮಂಜುನಾಥ ಸ್ವಾಮೀಜಿ, ಬೆಳವಿ ಸಿದ್ಧಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಹಿರಿಯ ವಕೀಲ ಆರ್.ವಿ. ಜೋಶಿ, ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಬಿ. ಬಡಿಗೇರ್ ಇದ್ದರು.
ಬಾಗಲಕೋಟೆ: ‘ಖಾವಿ ಧರಿಸಿದ ಸ್ವಾಮೀಜಿ ಇನ್ನೊಬ್ಬ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಬಾರದು. ನಾನೇ ದೇವರು ಎನ್ನುವವರಿಗೆ ಏನು ಹೇಳಲು ಸಾಧ್ಯ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
‘ಬಸವ ತಾಲಿಬಾನಿಗಳು’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವ ಸ್ವಾಮೀಜಿ ಟೀಕಿಸಿರುವುದಕ್ಕೆ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬಸವಣ್ಣ ಹೇಳಿದ ತತ್ವಗಳನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ. ಮೂಢನಂಬಿಕೆಗಳು ಶಾಶ್ವತವಾಗಿ ಇರಬೇಕು ಎಂಬ ಮನಸ್ಥಿತಿ ಅವರದ್ದು’ ಎಂದರು.
‘ಗುಲಾಮಗಿರಿ ಬೇಡ. ಎಲ್ಲರನ್ನೂ ಸಮಾನವಾಗಿ, ಮಾನವೀಯತೆಯಿಂದ ಕಾಣಿರಿ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ, ಇವರು ಪಾದ ತೊಳೆದ ನೀರು ಕುಡಿಯಿರಿ ಎನ್ನುತ್ತಾರೆ. ಪಾದ ತೊಳೆದು ನೀರು ಕುಡಿಯಲಿಕ್ಕೆ ಅವರೇನು ದೇವರಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.