ADVERTISEMENT

ಚಿಕ್ಕೋಡಿ | ಆಳುವ ಸರ್ಕಾರದಿಂದಲೇ ಕನ್ನಡಕ್ಕೆ ಅಪಾಯ: ಎಸ್.ವೈ. ಹಂಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 1:49 IST
Last Updated 6 ಜನವರಿ 2026, 1:49 IST
ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗ ಹಮ್ಮಿಕೊಂಡ 8ನೇ ಕನ್ನಡ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಎಸ್.ವೈ. ಹಂಜಿ ಮಾತನಾಡಿದರು
ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗ ಹಮ್ಮಿಕೊಂಡ 8ನೇ ಕನ್ನಡ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಎಸ್.ವೈ. ಹಂಜಿ ಮಾತನಾಡಿದರು   

ಚಿಕ್ಕೋಡಿ: ‘ಒಂದೆಡೆ ಸಾಲು ಸಾಲು ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿದ್ದು, ಮತ್ತೊಂದೆಡೆ ಕನ್ನಡ ಉಳಿಸಿ ಎಂದು ಹೇಳುವ ಸರ್ಕಾರದಿಂದಲೇ ಕನ್ನಡ ಭಾಷೆಗೆ ಅಪಾಯವಿದೆ’ ಎಂದು ಹಿರಿಯ ಸಾಹಿತಿ ಎಸ್.ವೈ. ಹಂಜಿ ಅಭಿಪ್ರಾಯಪಟ್ಟರು.

ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ 8ನೇ ಕನ್ನಡ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡಕ್ಕೆ ಪ್ರಾಮುಖ್ಯತೆ ಕೊಡದೇ, ಸರ್ಕಾರ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡುವುದೇಕೆ? ಇಂಗ್ಲಿಷ್ ಕಲಿತು ಅದೆಷ್ಟು ಜನ ಕನ್ನಡಿಗರು ಅಮೆರಿಕ, ಇಂಗ್ಲೆಂಡ್‌ಗೆ ಹೋಗುವವರಿದ್ದೇವೆ? ಗಡಿಯಲ್ಲಿ ಬೆವರು ಹರಿಸಿ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ಸಂಘಟನೆಗಳಿಗೆ ಸರ್ಕಾರ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಸುಬ್ರಾವ ಎಂಟೆತ್ತಿನವರ ಮಾತನಾಡಿ, ‘ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಜೀವಂತವಾಗಿರುಷ್ಟು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಜೀವಂತಿಕೆ ಇಲ್ಲ. ಎಷ್ಟೋ ಕನ್ನಡ ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಯಲ್ಲಿ ಓದಿಸುತ್ತ, ಕನ್ನಡದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷ, ಹಿರಿಯ ಸಾಹಿತಿ ಬಸವರಾಜ ಜಗಜಂಪಿ, ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ, ಪಿ.ಜಿ. ಕೆಂಪಣ್ಣವರ, ಮಾಣಿಕ ಚಂದಗಡೆ, ಶಿರೀಷ್ ಜೋಶಿ, ಕುಮಾರ ತಳವಾರ, ಸತಗೌಡ ಸಾಂಗಾವೆ ಇದ್ದರು.

‘ವಚನ ಮತ್ತು ಅಭಂಗ ಸಾಹಿತ್ಯ’ ಕುರಿತ ವಿಚಾರಗೋಷ್ಠಿಯಲ್ಲಿ ರಂಗತಜ್ಞ ರಾಮಕೃಷ್ಣ ಮರಾಠೆ ಉಪನ್ಯಾಸ ನೀಡಿದರು. ಕಾದಂಬರಿಕಾರ ಶಿರೀಷ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಲಲಿತಾ ಹಿರೇಮಠ, ಸರೋಜಿನಿ ಸಮಾಜೆ, ಅರ್ಜುನ ನಿಡಗುಂದೆ, ಚಂದ್ರಶೇಖರ ಚಿನಕೇಕರ,ಶಿವಣ್ಣ ಕಾಳಪ್ಪಗೋಳ, ಬಾಳಸಾಹೇಬ ಗವನಾಳೆ, ಡಿ.ಬಿ. ಕುಂಬಾರ, ಶಿವಾನಂದ ಬಾಗಾಯಿ ಸೇರಿದಂತೆ 19ಕ್ಕೂ ಹೆಚ್ಚು ಕವಿಗಳು ಕನ್ನಡ ನಾಡು ನುಡಿ, ಪ್ರೇಮ ಪ್ರಸಂಗ, ನಿಸರ್ಗ, ಮಾನವೀಯತೆ ಕುರಿತ ಕವನಗಳನ್ನು ವಾಚಿಸಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕಾದಂಬರಿಕಾರ ಶಿರೀಷ್ ಜೋಶಿ ಮಾತನಾಡಿ, ‘ಕಾವ್ಯಕ್ಕೆ ಮಂತ್ರಶಕ್ತಿ ಇದ್ದು, ಇಂದಿನ ಕವಿತೆಗಳಲ್ಲಿ ಪರಂಪರೆ ಕೊಂಡಿ ಕಳಚಿ ಬೀಳುತ್ತಿದೆ ಎಂದು ಭಾಸವಾಗುತ್ತಿದೆ. ಲವಯಲ್ಲದ ಕವಿತೆಗಳು ಪ್ರಳಯದಂತೆ. ಕವಿತೆಗಳಲ್ಲಿ ಲಯವಿರಬೇಕು’ ಎಂದರು.

ವಿವಿಧ ಕಲಾವಿದರು, ಸ್ಥಳೀಯ ಶಾಲೆ– ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.