
ಹಾರೂಗೇರಿ: ‘ಸಮ್ಮೇಳನಗಳು ಒಡೆದ ಮನಸ್ಸುಗಳನ್ನು ಕಟ್ಟುವ ಸಾಮರಸ್ಯದ ತಾಣಗಳಾಗಿವೆ. ಆಧುನಿಕ ಭರಾಟೆಯಲ್ಲಿ ಛಿದ್ರವಾಗುತ್ತಿರುವ ಮನಸ್ಸುಗಳಲ್ಲಿ ಬಂಧುತ್ವ ಭಾವ ಬೆಳೆಸುತ್ತವೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ವಿ.ಎಸ್.ಮಾಳಿ ಅಭಿಪ್ರಾಯಪಟ್ಟರು.
ಇಲ್ಲಿನ ಜೈನ ಸಮುದಾಯ ಭವನದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಜಿಲ್ಲಾಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಸಮ್ಮೇಳನಗಳು ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸುತ್ತವೆ. ಅವು ಮೆರವಣಿಗೆಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕು ಕಟ್ಟುವ ಶಕ್ತಿಕೇಂದ್ರಗಳಾಗಬೇಕು. ನಮಗೆ ಸಂಪತ್ತಿನ ಶ್ರೀಮಂತಿಕೆ ಬೇಡ, ಸಾಂಸ್ಕೃತಿಕ ಶ್ರೀಮಂತಿಕೆ ಬೇಕು. ಇಲ್ಲದಿದ್ದರೆ ಬಹುತ್ವ ಭಾರತದ ಕನಸು ಸಾಕಾರಗೊಳ್ಳದು. ಪ್ರಜಾಪ್ರಭುತ್ವದ ಆಶಯ ಈಡೇರದು’ ಎಂದು ಒತ್ತಿಹೇಳಿದರು.
‘ನಾನು ಹಾರೂಗೇರಿಗೆ ತೊತ್ತಾಗಿ ದುಡಿದೆ. ಅದು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆಸಿತು. ನಾನು ಸಲ್ಲಿಸಿದ ಸೇವೆ ಅಲ್ಪ. ಆದರೆ, ನೀವು ಕೊಟ್ಟ ಪ್ರೀತಿ ಬೆಟ್ಟದಷ್ಟು’ ಎಂದರು.
ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ‘ವೈಷಮ್ಯ ತುಂಬಿದ ಭಾವನೆಗಳು ದೇಶವನ್ನು ಕೆಡವಿದರೆ, ಮಾನವೀಯ ಮೌಲ್ಯ, ಪ್ರೀತಿ ತುಂಬಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೇಶವನ್ನು ಸದೃಢವಾಗಿ ಕಟ್ಟುತ್ತವೆ’ ಎಂದು ಹೇಳಿದರು.
ಶಾಸಕರಾದ ಮಹೇಂದ್ರ ತಮ್ಮಣ್ಣವರ, ದುರ್ಯೋಧನ ಐಹೊಳೆ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾ ಬಾಳಪ್ಪನವರ ಸ್ವಾಗತಿದರು. ವಿಠ್ಠಲ ಜೋಡಟ್ಟಿ ಮತ್ತು ಶಾರದಾ ಬಿ.ಎಲ್. ನಿರೂಪಿಸಿದರು. ಸಿ.ಎಂ.ದರಬಾರೆ ವಂದಿಸಿದರು.
ಹಾರೂಗೇರಿ ಪುರಸಭೆ ಸದಸ್ಯರು, ವಿವಿಧ ಸಂಘಟನೆಯವರು ಹಾಜರಿದ್ದರು.
ಕಣ್ಮನಸೆಳೆದ ಮೆರವಣಿಗೆ
ಕನ್ನಡ ಹಬ್ಬದ ಸಡಗರದಲ್ಲಿ ಇಡೀ ಹಾರೂಗೇರಿ ಪಟ್ಟಣ ಮಿಂದೆದ್ದಿತು. ಬೆಳಿಗ್ಗೆ ನಡೆದ ಸರ್ವಾಧ್ಯಕ್ಷರ ಮೆರವಣಿಗೆ ಕಣ್ಮನಸೆಳೆಯಿತು. ವಿವಿಧ ರೂಪಕಗಳು, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ಜಂಬಗಿ ಆಸ್ಪತ್ರೆಯಿಂದ ಹೊರಟ ಮೆರವಣಿಗೆ, ಬಿ.ಆರ್.ಅಂಬೇಡ್ಕರ್ ವೃತ್ತ, ವಿಶ್ವಕರ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನವೃಷಬೇಂದ್ರ ವೃತ್ತ ಮಾರ್ಗವಾಗಿ ಸಾಗಿ, ಸಮ್ಮೇಳನದ ವೇದಿಕೆ ತಲುಪಿತು.