
ಬೈಲಹೊಂಗಲ: ‘ಜ.6ರಂದು ನೇಗಿನಹಾಳ ಗ್ರಾಮದಲ್ಲಿ 8ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ಪ್ರತಿಯೊಬ್ಬರೂ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು’ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನೇಗಿನಹಾಳ ಗ್ರಾಮದಲ್ಲಿ ಜ.6ರಂದು ನಡೆಯಲಿರುವ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಮ್ಮೇಳನದ ಯಶಸ್ವಿಗೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕನ್ನಡ ಮನಸ್ಸುಗಳು, ಕನ್ನಡಾಭಿಮಾನಿಗಳು, ಬೈಲಹೊಂಗಲ, ನೇಗಿನಳಾದ ಸಮಸ್ತ ಜನತೆ ಸಹಕಾರ ನೀಡಬೇಕು’ ಎಂದರು.
ಕೆಪಿಸಿಸಿ ಸದಸ್ಯೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ರೋಹಿಣಿ ಪಾಟೀಲ ಮಾತನಾಡಿ, ‘ನೇಗಿನಹಾಳ ಗ್ರಾಮದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಮ್ಮಾರ ಅವರು ಉದ್ಘಾಟಕರಾಗಿ, ಸಾಹಿತಿ ಪ್ರೊ.ಕೆ.ಎಸ್.ಕೌಜಲಗಿ ಅವರು ಸರ್ವಾಧ್ಯಕ್ಷರಾಗಿ ಆಗಮಿಸುತ್ತಿದ್ದಾರೆ. ಇನ್ನೂ ಹಲವಾರು ಗಣ್ಯರು, ಸಾಕಷ್ಟು ಜನ ಸಾಹಿತಿಗಳು, ಕವಿಗಳು, ಕನ್ನಡದ ಸೇವಕರು ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಲ್ಲಿದ್ದಾರೆ. ಇದು ಖುಷಿ ತಂದಿದೆ. ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸುವುದಾಗಿ’ ಅವರು ತಿಳಿಸಿದರು.
ತಹಶೀಲ್ದಾರ್ ಎಚ್.ಎನ್.ಶಿರಹಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜೂನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ನಗರಸಭೆ ವಿರೇಶ ಹಸಬಿ ವೇದಿಕೆಯಲ್ಲಿ ಇದ್ದರು.
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಕನ್ನಡ ಸೇವಕರು, ನಾಗರಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.