ADVERTISEMENT

ಹಂದಿಗುಂದ|ಕಪ್ಪಲಗುದ್ದಿ ಶಾಲೆಗೆ ನೂರರ ಸಂಭ್ರಮ: ಸಮಾವೇಶಗೊಂಡ ಹಳೆಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:49 IST
Last Updated 12 ನವೆಂಬರ್ 2025, 2:49 IST
   

ಹಂದಿಗುಂದ: ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಈಗ ಶತಮಾನದ ಸಂಭ್ರಮ. ಬರೋಬ್ಬರಿ ನೂರು ವರ್ಷಗಳಿಂದ ಈ ಶಾಲೆ ಅದೆಷ್ಟು ಹಳ್ಳಿಯ ಮಕ್ಕಳಿಗೆ ವಿದ್ಯಾದಾನ ಮಾಡಿದೆಯೋ ಲೆಕ್ಕವಿಲ್ಲ. ಅವರೆಲ್ಲ ಈಗ ದೇಶ– ವಿದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶತಮಾನೋತ್ಸವಕ್ಕಾಗಿ ಮತ್ತೆ ಎಲ್ಲ ಸ್ನೇಹ ಬಳಗವೂ ತಮ್ಮೂರಿನ ಹೆಮ್ಮೆಯ ಶಾಲೆಗೆ ಮರಳಿ ಬಂದಿದೆ.

ರೋಚಕ ಇತಿಹಾಸ: 1925ರ ನವೆಂಬರ್‌ 12ರಂದು (ಇಂದಿಗೆ ಸರಿಯಾಗಿ 100 ವರ್ಷ) ಗ್ರಾಮದ ನಾಲ್ಕು ದೇವರ ಗುಡಿಯಲ್ಲಿ ಪ್ರಾಥಮಿಕ ಶಾಲೆ ಆರಂಭವಾಯಿತು. ಅದರ ನೆನಪಿಗಾಗಿ ನೂರರ ಸಂಭ್ರಮದ ಕಾರ್ಯಕ್ರಮಕ್ಕೆ ವೈಭವಯುತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಬದುಕು ರೂಪಿಸಿಕೊಟ್ಟ ಶಾಲೆಯಲ್ಲಿ ಮತ್ತೆ ತಮ್ಮ ಹೆಜ್ಜೆ ಗುರುತುಗಳನ್ನು ನೋಡಲು ಹಳೆಯ ವಿದ್ಯಾರ್ಥಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಗ್ರಾಮದ ಹಿರಿಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮರಳಿ ಶಾಲೆಗೆ ಬರುವ ಸಂಭ್ರಮದಲ್ಲಿದ್ದಾರೆ. ಇನ್ನೇನು ಬೆಳಕಾದರೆ ಅವರ ಹೆಮ್ಮೆಯ ವಿದ್ಯಾದೇಗುಲಕ್ಕೆ ನೂರು ವಸಂತಗಳ ವೈಭವ ಮರಳಲಿದೆ. ಇತಿಹಾಸದ ಪುಟ ಮರಳಿ ತೆರೆಯಲಿದೆ.

ADVERTISEMENT

ಈಗಾಗಲೇ ಶಾಲೆಯು ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ. ಮುಖ್ಯ ಶಿಕ್ಷಕ ಪ್ರಕಾಶ ದಿವಾಕರ ಸತತ ಪ್ರಯತ್ನದಿಂದಾಗಿ ಕ್ರೀಡಾಂಗಣಕ್ಕಾಗಿ ಸರ್ಕಾರದಿಂದ 4 ಎಕ್ಕರೆ ಭೂಮಿ ಹಾಗೂ ಕೊಠಡಿ ವ್ಯವಸ್ಥೆಗೆ ಅನುಕೂಲತೆ ಮಾಡಲಾಗಿದೆ. ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಇದೆಲ್ಲ ಮಂಜೂರಾಗಿದೆ.

ಹಳೆಯ ವಿದ್ಯಾರ್ಥಿಗಳು ಶಾಲೆಗೆ ಫ್ರಿಡ್ಜ್, ಟ್ರಜರಿ, ಸ್ಮಾರ್ಟ್‌ಕ್ಲಾಸ್, ಸೈರನ್, ಸೌಂಡ್ ಸಿಸ್ಟಮ್, ನೀರು ಫಿಲ್ಟರ್ ಘಟಕ, ಕೈತೋಟಕ್ಕೆ ಸ್ಪಿಂಕ್ಲರ್, ಶಾಲೆ ಮಹಾದ್ವಾರಕ್ಕೆ ಮಹಾರಾಜ ಗೇಟ್, ಪೇವರ್ಸ್‌ ಅಳವಡಿಕೆ, ಹನಿ ನೀರಾವರಿ, ಹಸಿಕಸ– ವನಕಸ ನಿರ್ವಹಣೆ ಸಾಮಗ್ರಿ, ಮಳೆ ನೀರು ಕೊಯ್ಲು, ಹೈಟೆಕ್ ಶೌಚಾಲಯ ಎಲ್ಲವನ್ನೂ ಕೊಡಿಸಿದ್ದಾರೆ.

ಗ್ರಾಮಸ್ಥರು ಹಾಗೂ ಕಲಿತ ವಿದ್ಯಾರ್ಥಿಗಳಿಂದ ದೇಣಿಗೆಯಾಗಿ ₹10 ಲಕ್ಷ ಸಂಗ್ರಹವಾಗಿದೆ. ಕಲಿಕಾ ಗುಣಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರಿಗೆ 300ಕ್ಕೂ ಮಕ್ಕಳಿದ್ದಾರೆ. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಈ ಶಾಲೆಯನ್ನು ಮೇಲ್ದರ್ಜೆಗೇರಿಸಿ ಪ್ರೌಢಶಾಲೆಯನ್ನಾಗಿ ಮಾಡಿದ್ದಾರೆ. ಹಸಿರು ಶಾಲೆ, ಪರಿಸರ ಮಿತ್ರ ಸೇರಿದಂತೆ ಹಲವಾರು ಪ್ರಶಸ್ತಿಗಳೂ ಬಂದಿವೆ.

ಅಜ್ಜ ಕಲಿತ ಶಾಲೆಯಲ್ಲಿ ನಾನು ಎಸ್‌ಡಿಎಂಸಿ ಅಧ್ಯಕ್ಷನಾಗಿದ್ದೇನೆ. ಖುಷಿ ತಂದಿದೆ. ಗ್ರಾಮಸ್ಥರು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ನೆರವಿನಿಂದ ವೈಭವ ಮರಳಿದೆ
ಗುರುಪಾದ ಅಂಗಡಿ, ಅಧ್ಯಕ್ಷ, ಎಸ್‌ಡಿಎಂಸಿ, ಕಪ್ಪಲಗುದ್ದಿ
ಶಾಸಕರು ಅಧಿಕಾರಿಗಳು ಗ್ರಾಮ ಪಂಚಾಯಿತಿ ಗ್ರಾಮಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ನಮ್ಮ ಶಾಲೆ ಉನ್ನತೀಕರಣ ಕಂಡಿದೆ
ಪ್ರಕಾಶ ದಿವಾಕರ ಮುಖ್ಯ ಶಿಕ್ಷಕ

ಸಂಭ್ರಮದ ಕಾರ್ಯಕ್ರಮ

ಇಂದು ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನ.12ರಂದು ಬೆಳಿಗ್ಗೆ 10 ಗಂಟೆಗೆ ಶತಮಾನೋತ್ಸವ ಜರುಗುವುದು. ಶೇಗುಣಶಿಯ ಮಹಾಂತ ಸ್ವಾಮೀಜಿ ಬೆಳಗಲಿಯ ಸಿದ್ದರಾಮ ಸ್ವಾಮೀಜಿ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಸಾನ್ನಿಧ್ಯ ವಹಿಸುವರು. ಶಾಸಕ ಶಾಸಕ ಮಹೇಂದ್ರ ತಮ್ಮಣ್ಣವರ ಉದ್ಘಾಟಿಸುವರು.  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ನಾಯಿಕ ಅಧ್ಯಕ್ಷತೆ ವಹಿಸುವರು. ಎಸ್‌ಡಿಎಂಸಿ ಅಧ್ಯಕ್ಷ ಗುರುಪಾದ ಅಂಗಡಿ ಉಪಸ್ಥಿತ ಇರುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಶಾಸಕ ಲಕ್ಷ್ಮಣ ಸವದಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.