ADVERTISEMENT

ಸಂಸದ ಅಂಗಡಿ ಕ್ಷಮೆಯಾಚನೆಗೆ ಕರವೇ ಪಟ್ಟು

ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕಾರ;

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 11:30 IST
Last Updated 19 ಜೂನ್ 2019, 11:30 IST
ಬೆಳಗಾವಿಯಲ್ಲಿ ಬುಧವಾರ ಕರವೇ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ವಿರುದ್ಧ ಪ್ರತಿಭಟಿಸಿ, ಪ್ರತಿಕೃತಿ ಸುಟ್ಟುಹಾಕಿದರು.
ಬೆಳಗಾವಿಯಲ್ಲಿ ಬುಧವಾರ ಕರವೇ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ವಿರುದ್ಧ ಪ್ರತಿಭಟಿಸಿ, ಪ್ರತಿಕೃತಿ ಸುಟ್ಟುಹಾಕಿದರು.   

ಬೆಳಗಾವಿ: ‘ಲೋಕಸಭೆಯಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿರುವ ಸಂಸದ ಸುರೇಶ ಅಂಗಡಿ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಸಂಸದರ ನಿವಾಸದ ಬಳಿ ಪ್ರತಿಭಟನೆ ಮಾಡಿದರು.

ಸಂಸದರ ಪ್ರತಿಕೃತಿಯನ್ನು ಸುಟ್ಟು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು ಅವರನ್ನು ತಡೆದರು. ಹಲವರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು, ಸಂಸದರ ನಿವಾಸಕ್ಕೆ ಹೋಗುವ ಕ್ಲಬ್‌ ರಸ್ತೆಯಲ್ಲಿ ಕರವೇ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ‘ಕನ್ನಡ ನೆಲ ಬೆಳಗಾವಿಯಿಂದ ಸುರೇಶ ಅಂಗಡಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ನೆಲದ ಭಾಷೆಯಾದ ಕನ್ನಡದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಬೇಕಾಗಿತ್ತು. ಆದರೆ, ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರನ್ನು ಓಲೈಸುವ ಉದ್ದೇಶದಿಂದಲೇ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಬೆಳಗಾವಿಯ ಸುರೇಶ ಅಂಗಡಿ ಹಾಗೂ ಉತ್ತರ ಕನ್ನಡದ ಅನಂತಕುಮಾರ್‌ ಹೆಗಡೆ ಇವರಿಬ್ಬರು ಮಾತ್ರ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ ಇತರ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಿಗಿರುವ ಭಾಷಾ ಪ್ರೀತಿ ಸುರೇಶ ಅಂಗಡಿ ಹಾಗೂ ಅನಂತಕುಮಾರ್‌ ಹೆಗಡೆ ಅವರಿಗೆ ಏಕಿಲ್ಲ?’ ಎಂದು ಪ್ರಶ್ನಿಸಿದರು.

‘ತಾವು ಮಾಡಿರುವ ತಪ್ಪಿಗೆ, ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸುರೇಶ ಅಂಗಡಿ ಅವರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಗಣೇಶ ರೋಕಡೆ, ರಮೇಶ ತಳವಾರ, ವಾಸು ಬಸನಾಯಕರ, ಬಸು ಅವರೊಳ್ಳಿ, ಪ್ರಕಾಶ ಲಮಾಣಿ, ಹೊಳೆಪ್ಪ, ಬಾಲು ಜಡಗಿ, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.