ADVERTISEMENT

ಎಂಇಎಸ್‌, ಶಿವಸೇನೆ ನಾಯಕರ ಪ್ರಚೋದನಕಾರಿ ಹೇಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

ಕರವೇ ಕಾರ್ಯಕರ್ತರಿಂದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 12:07 IST
Last Updated 18 ಮಾರ್ಚ್ 2021, 12:07 IST
ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಮುಗಿದು ಹೋಗಿದ್ದರೂ ಪದೇ ಪದೇ ಪ್ರಸ್ತಾಪಿಸಿ, ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಶಿವಸೇನಾ ಮುಖಂಡರನ್ನು ಕೂಡಲೇ ಬಂಧಿಸಬೇಕು. ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಲ್ಲಿ ವೇದಿಕೆಯ ಅಧ್ಯಕ್ಷ ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ‘ಕನ್ನಡ ಹಾಗೂ ಮರಾಠಿ ಭಾಷಿಗರು ಸೌಹಾರ್ದದಿಂದ ಇದ್ದೇವೆ. ಹೀಗಿದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿವಾದ ಕೆಣಕುತ್ತಿರುವವರು ಹಾಗೂ ಕಾನೂನು ಮತ್ತು ಸುವ್ಯವವ್ಥೆ ಹಾಳು ಮಾಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರವೀಣ್‌ ಶೆಟ್ಟಿ ಮಾತನಾಡಿ, ‘ಬೆಳಗಾವಿಯಲ್ಲಿ ಕೆಲವು ದಿನಗಳಿಂದ ಶಿವಸೇನಾ ಹಾಗೂ ಎಂಇಎಸ್‌ನವರ ಪುಂಡಾಟಿಕೆ ಹೆಚ್ಚಾಗಿದೆ. ಗಡಿ ಪ್ರದೇಶದಲ್ಲಿ ಶಾಂತಿ ಕದಡುವ ಕೆಲಸವನ್ನು ಆ ಸಂಘಟನೆಯವರು ಮಾಡುತ್ತಿದ್ದಾರೆ. ಮುಗ್ಧ ಮರಾಠಿ ಭಾಷಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಕನ್ನಡ ಶಾಲು ಹಾಕಿದವರು ಕಂಡಲ್ಲಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಂಥದ್ದನ್ನು ಸರ್ಕಾರ ಸಹಿಸಿಕೊಳ್ಳಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ರಾಜ್ಯೋತ್ಸವ ಬಹಿಷ್ಕರಿಸಿ ನ.1ರಂದು ಎಂಇಎಸ್‌ ಹಾಗೂ ಶಿವಸೇನಾದವರು ಕರಾಳ ದಿನ ಆಚರಣೆ ಮಾಡುತ್ತಿದ್ದರೂ ಸರ್ಕಾರ ಆವರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲದಿರುವುದು ಸರಿಯಲ್ಲ. ಕನ್ನಡಿಗರಾದ ನಮ್ಮ ಸಹನೆಗೂ ಮಿತಿ ಇದೆ. ಅದನ್ನು ಪರೀಕ್ಷಿಸಬೇಡಿ. ನಾಡದ್ರೋಹಿಗಳ ಗೂಂಡಾಗಿರಿ ಸಹಿಸಲು ಸಾಧ್ಯವಿಲ್ಲ. ನಾವು ಕೂಡ ಗಡಿಗೆ ನುಗ್ಗಿ ಕನ್ನಡ ಧ್ವಜ ಹಾರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಗಡಿಗೆ ನುಗ್ಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪೊಲೀಸರು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರನ್ನು ಅಲ್ಲಲ್ಲಿ ತಡೆದಿದ್ದಾರೆ’ ಎಂದು ದೂರಿದರು.

‘ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಭದ್ರತೆ ಒದಗಿಸಬೇಕು. ಅವರ ಅಂಗಡಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ನಂತರ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಧ್ವಜ ಹಾರಿಸಲು ತೆರಳುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಅಭಿಲಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.