ADVERTISEMENT

ಸಚಿವ ಸ್ಥಾನಕ್ಕಾಗಿ ಲಾಭಿ: ಮಹಾ‌ ಮಾಜಿ ಸಿಎಂ ಫಡಣವಿಸ್ ಭೇಟಿಯಾದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 13:24 IST
Last Updated 3 ಫೆಬ್ರುವರಿ 2022, 13:24 IST
ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಗೋವಾದಲ್ಲಿ ಗುರುವಾರ ಭೇಟಿಯಾದರು. ಮುಖಂಡರಾದ ಅಶೋಕ್‌ಕುಮಾರ್‌ ಅಸೋದೆ ಹಾಗೂ ಕಿರಣ್ ಜಾಧವ್ ಇದ್ದಾರೆ
ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಗೋವಾದಲ್ಲಿ ಗುರುವಾರ ಭೇಟಿಯಾದರು. ಮುಖಂಡರಾದ ಅಶೋಕ್‌ಕುಮಾರ್‌ ಅಸೋದೆ ಹಾಗೂ ಕಿರಣ್ ಜಾಧವ್ ಇದ್ದಾರೆ   

ಬೆಳಗಾವಿ: ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಸಚಿವ ಸಂಪುಟದಲ್ಲಿ ತಮಗೆ ಮತ್ತೆ ಸ್ಥಾನ ಕಲ್ಪಿಸುವಂತೆ ಹೈಕಮಾಂಡ್‌ಗೆ ಮನವೊಲಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರನ್ನು ಕೋರಿದ್ದಾರೆ.

ನೆರೆಯ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿರುವ ಅವರು ದೇವೇಂದ್ರ ಅವರನ್ನು ಗುರುವಾರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಚಿವ ಸ್ಥಾನ ಪಡೆದುಕೊಳ್ಳಲು ಶತಪ್ರಯತ್ನ ನಡೆಸಿರುವ ರಮೇಶ ದೆಹಲಿ ಮಟ್ಟದಲ್ಲೂ ಸಾಕಷ್ಟು ಲಾಬಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ ಮುಖಂಡರ ಮೂಲಕವೂ ಒತ್ತಡ ಹಾಕಿಸುತ್ತಿದ್ದಾರೆ. ಈ ನಡುವೆ, ಅವರ ರಾಜಕೀಯ ಗಾಡ್ ಫಾದರ್ ಎನ್ನಲಾಗುವ ಫಡಣವಿಸ್‌ ಜೊತೆಗೂ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಅವರ ಮೂಲಕವೂ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಹಳಷ್ಟು ಶ್ರಮಿಸಿದ್ದೇನೆ. ಹೀಗಿದ್ದರೂ ಜಿಲ್ಲೆಯಲ್ಲಿ ಪಕ್ಷದಲ್ಲಿನ ಕೆಲವರು ನನ್ನ ವಿರುದ್ಧವೇ ಷಡ್ಯಂತ್ರ ನಡೆಸುತ್ತಿದ್ದಾರೆ. ಅಪವಾದ ಹೊರಿಸುತ್ತಿದ್ದಾರೆ. ಇದರಿಂದ ಬಹಳ ನೋವಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ಹೈಕಮಾಂಡ್ ಗಮನಕ್ಕೆ ತರಬೇಕು’ ಎಂದೂ ಕೋರಿದ್ದಾರೆ ಎಂದು ಮಾಹಿತಿ ನೀಡಿವೆ.

ಶೀಘ್ರದಲ್ಲೇ ಅವರು ದೆಹಲಿಗೂ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.