ADVERTISEMENT

ಸಿಇಟಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ₹1 ಲಕ್ಷ ಪ್ರೋತ್ಸಾಹ ಪಡೆದ ಗ್ರಾಮೀಣ ಪ್ರತಿಭೆ

ತಂದೆ ಖಾಸಗಿ ವಾಹನ ಚಾಲಕ, ತಾಯಿ ಅಂಗನವಾಡಿ ಕಾರ್ಯಕರ್ತೆ, ಬಡತನದಲ್ಲೇ ಅರಳಿದ ಪ್ರತಿಭೆ ಸ್ನೇಹಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 3:02 IST
Last Updated 20 ಸೆಪ್ಟೆಂಬರ್ 2025, 3:02 IST
ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಸ್ನೇಹಾ ಮಂಜುನಾಥ ದಾಮನ್ನವರ ಅವರಿಗೆ ₹1 ಲಕ್ಷ ಪ್ರೋತ್ಸಾಹ ಧನದ ಚೆಕ್ ನೀಡಿದರು
ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಸ್ನೇಹಾ ಮಂಜುನಾಥ ದಾಮನ್ನವರ ಅವರಿಗೆ ₹1 ಲಕ್ಷ ಪ್ರೋತ್ಸಾಹ ಧನದ ಚೆಕ್ ನೀಡಿದರು   

ಹಂದಿಗುಂದ: ರಾಯಬಾಗ ತಾಲ್ಲೂಕಿನ ಮೊರಬ ಗ್ರಾಮದ ವಿದ್ಯಾರ್ಥಿನಿ ಸ್ನೇಹಾ ಮಂಜುನಾಥ ದಾಮನ್ನವರ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ಸಿಇಟಿ ಪರೀಕ್ಷೆಯಲ್ಲಿ ಸಾಧನೆಗೈದು ಮುಖ್ಯಮಂತ್ರಿ ಅವರಿಂದ ₹1 ಲಕ್ಷ ಪ್ರೋತ್ಸಾಹ ಧನ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ಇತರ ಸಚಿವರು ಪ್ರತಿಭಾವಂತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನದ ಚೆಕ್‌ ನೀಡಿದರು.

ಹಳ್ಳಿಯ ಪ್ರತಿಭೆ ಸ್ನೇಹಾ ಅವರು ಬಡತನದಲ್ಲೇ ಅರಳಿದ ನಕ್ಷತ್ರ. ಈ ವಿದ್ಯಾರ್ಥಿನಿಯ ಸಾಧನೆ ಈಗ ಇಡೀ ಜಿಲ್ಲೆಯ ಮಕ್ಕಳಿಗೆ ಮಾರ್ಗದರ್ಶಿಯಾಗಿದೆ.

ADVERTISEMENT

ಮೊರಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಓದಿ, 6 ರಿಂದ 10ನೇ ತರಗತಿಗೆ ಯಕ್ಸಂಬಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 95.53 ಅಂಕಗಳಿಸಿದರು. ನಂತರ ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪದವಿಪೂರ್ವ ಕಾಲೇಜಿನಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಶೇ 95.83ರಷ್ಟು ಅಂಕ ಪಡೆದರು. ಸಿಇಟಿಯಲ್ಲಿ ಪಶು ವೈದ್ಯಕೀಯ ಪ್ರ್ಯಾಕ್ಟಿಕಲ್ 365ನೇ ರ್‍ಯಾಂಕ್‌ ಪಡೆದು ಶಿವಮೊಗ್ಗದ ಸರ್ಕಾರಿ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

ಸ್ನೇಹಾ ಅವರ ತಂದೆ ಮಂಜುನಾಥ ಬಡತನದಲ್ಲೇ ಮೂವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದ ಸಿದ್ದಲಿಂಗಪ್ಪ ರಾಮ ಬಾನೆ (ಸರ್ಕಾರ) ಅವರ ಕಾರು ಚಾಲಕರಾಗಿದ್ದರು. ಈಗಲೂ ಅವರ ಕುಟುಂಬದ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಆರತಿ ಅವರು ಅಂಗನವಾಡಿ ಕಾರ್ಯಕರ್ತೆ.

ಸ್ನೇಹಾ ಅವರ ಅಣ್ಣ ಅಭಿಷೇಕ್‌ ಬೆಳಗಾವಿ ಗೋಗಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇ ಅಂಡ್ ಸಿ ವ್ಯಾಸಂಗ ಮಾಡುತ್ತಿದ್ದಾರೆ. ತಂಗಿ ಸೃಷ್ಟಿ ಕೂಡ ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.

ಸ್ನೇಹಾ ತಾವು ಓದಿದ ಪ್ರೌಢಶಾಲೆ ಶಿಷ್ಯವೇತನ ಪಡೆದು, ಪಿಯುಸಿಯಲ್ಲಿ ತೃತೀಯ ಬಹುಮಾನ ₹10 ಸಾವಿರ ಪಡೆದು ಆ ಹಣದಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಸಿಇಟಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದರು.

ಗ್ರಾಮೀಣ ಪ್ರತಿಭೆಯ ಈ ಸಾಧನೆ ಕಂಡು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸ್ನೇಹಾ ಹಾಗೂ ಅವರ ಪಾಲಕರನ್ನು ಸನ್ಮಾನಿಸಿದ್ದಾರೆ.
ಸಿ.ಎಸ್.ಹಿರೇಮಠ
ನಮ್ಮ ಮೂವರು ಮಕ್ಕಳು ಪ್ರತಿಭಾವಂತರಾಗಿದ್ದು ಹೆಮ್ಮೆ ತಂದಿದೆ. ಅವರ ಓದು ಪರಿಶ್ರಮಮವು ಮನೆತನಕ್ಕೆ ಹಿರಿಮೆ ತಂದಿದೆ. ಊರಿನ ಕೀರ್ತಿ ಹೆಚ್ಚಿಸಿದ್ದು ಖುಷಿ ತಂದಿದೆ
ಮಂಜುನಾಥ ದಾಮನ್ನವರ ಸ್ನೇಹಾ ಅವರ ತಂದೆ
ತಂದೆ– ತಾಯಿ ಪರಿಶ್ರಮವೇ ನನಗೆ ಪ್ರೇರಣೆಯಾಯಿತು. ಕನಿಷ್ಠ 8 ತಾಸು ಓದುವುದು ರೂಢಿ. ನಾನು ಮಾತ್ರವಲ್ಲ; ಯಾರೆಲ್ಲರೂ ಈ ಸಾಧನೆ ಮಾಡಬಹುದು
ಸ್ನೇಹಾ ಮಂಜುನಾಥ ದಾಮನ್ನವರ ಸಾಧಕ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.