ADVERTISEMENT

ಕೋವಿಡ್ 2ನೇ ಅಲೆ: ಹೊಸ ವರ್ಷಾಚರಣೆಗೆ ಕಡಿವಾಣ ಅಗತ್ಯ -ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 8:22 IST
Last Updated 5 ಡಿಸೆಂಬರ್ 2020, 8:22 IST
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಬೆಳಗಾವಿ: ಕೋವಿಡ್ -19 ಎರಡನೇ ಅಲೆ ಕಾರಣದಿಂದಾಗಿ ಬಹಿರಂಗವಾಗಿ ಬಹಳ ಜನ ಸೇರಿ ಹೊಸ ವರ್ಷ ಆಚರಣೆ ಮಾಡುವುದಕ್ಕೆ ಕಡಿವಾಣ ಹಾಕಲೇಬೇಕಿದೆ. ಆದರೆ ಈ ಅವಧಿಯಲ್ಲಿ ನೈಟ್ ಕರ್ಫ್ಯೂ‌ ವಿಧಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡಲಾಗುವುದು. ಬೆಂಗಳೂರಿನ ಎಂ.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆ ಮಾತ್ರವಲ್ಲ ರಾಜ್ಯದಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ'
ಎಂದರು.

ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕೆಲವು ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಜನರು ಸಹಕಾರ ನೀಡಿಲ್ಲ. ನಿರೀಕ್ಷೆಯಂತೆಯೇ ಜನ ಜೀವನ ಎಂದಿನಂತೆಯೇ ಇದೆ. ಕೆಲವು ಕಡೆ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದವರು ಹಾಗೂ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.

ADVERTISEMENT

'ಲವ್ ಜಿಹಾದ್ ಶೋಷಣೆಗೆ ದಾರಿಯಾಗಿದೆ. ಯುವತಿಯರಿಗೆ ಮತಾಂತರದಿಂದ ಹಿಂಸೆ ಆಗುತ್ತಿರುವ ಬಗ್ಗೆ ಬಹಳ ದೂರುಗಳಿವೆ. ಪ್ರೇಮದ ಹೆಸರಿನಲ್ಲಿ ಆಗುತ್ತಿರುವ ಶೋಷಣೆ ತಡೆಯಲು ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಹಿಂದಿನ ಹತ್ತು ವರ್ಷಗಳಲ್ಲಿ ಆಗುತ್ತಿದ್ದಷ್ಟು ಪ್ರಮಾಣ ಡ್ರಗ್ಸ್ ಅನ್ನು ಕೇವಲ ಹತ್ತು ತಿಂಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಕಾಲೇಜುಗಳು ಸಂಪೂರ್ಣವಾಗಿ ತೆರೆದ ಮೇಲೆ ಜಾಗೃತಿ ಅಭಿಯಾನವನ್ನು ವ್ಯಾಪಕವಾಗಿ ನಡೆಸಲಾಗುವುದು.

ಡ್ರಗ್ಸ್ ದಂಧೆಗೆ ಸಹಕಾರ ಅಥವಾ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಲವರ ವಿರುದ್ಧ ಕ್ರಮ ವಹಿಸಲಾಗಿದೆ. ಹೊಸ ಹೊಸ ವಿಧಾನದಲ್ಲಿ ಡ್ರಗ್ಸ್ ಬರುತ್ತಿದೆ. ಇದನ್ನು ತಡೆಯಲು ಡಾರ್ಕ್ ನೆಟ್ ಅನ್ನು ಪೊಲೀಸರು ಭೇದಿಸಿದ್ದಾರೆ. ಕೆಲವು ಕೊರಿಯರ್ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಮಾದಕ ವಸ್ತುಗಳ ವಿರುದ್ಧದ ಸಮರ ಮುಂದುವರಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.