ADVERTISEMENT

₹37 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಏಪ್ರಿಲ್‌ವರೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:00 IST
Last Updated 19 ಫೆಬ್ರುವರಿ 2026, 16:00 IST
<div class="paragraphs"><p>ಆರ್.ಮಂಜುನಾಥ್</p></div>

ಆರ್.ಮಂಜುನಾಥ್

   

ಆರ್.ಮಂಜುನಾಥ್

ಬೆಳಗಾವಿ: ‘ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರ ₹37 ಸಾವಿರ ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದೆ. ಇದನ್ನು ತಕ್ಷಣ ಪಾವತಿಸದಿದ್ದರೆ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು. ಏಪ್ರಿಲ್‌ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮೂರು ವರ್ಷಗಳಿಂದ ಯಾವುದೇ ಕಾಮಗಾರಿಯ ಬಿಲ್‌ ನೀಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿಯೇ ₹3,458 ಕೋಟಿ ಬಾಕಿ ಉಳಿದಿದೆ. ನಾವು ನಮ್ಮ ಆಸ್ತಿಗಳನ್ನು ಅಡವಿಟ್ಟು ಕಾಮಗಾರಿಗಳನ್ನು ಮುಗಿಸಿದ್ದೇವೆ. ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ’ ಎಂದರು.

‘ಬಾಕಿ ಬಿಲ್‌ ನೀಡುವಂತೆ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿದ್ದೇವೆ. ಆದರೆ, ಇದೂವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಭೆಯನ್ನೂ ಕರೆಯುವ ಸೌಜನ್ಯ ತೋರಿಸಿಲ್ಲ’ ಎಂದು ದೂರಿದರು.

‘ಬಿಲ್‌ ಬಾಕಿ ಉಳಿಯಲು ಹಿಂದಿನ ಸರ್ಕಾರ ಕಾರಣ ಎಂದು ನೆಪ ಹೇಳಲಾಗುತ್ತಿದೆ. ಕಾಮಗಾರಿ ಯಾವಾಗ ನಡೆದಿದ್ದರೂ ಪ್ರಸ್ತುತ ಸರ್ಕಾರವೇ ಅವುಗಳ ಬಿಲ್‌ ಬಾಕಿ ಮಾಡುವುದು ಜವಾಬ್ದಾರಿ’ ಎಂದೂ ಹೇಳಿದರು.

‘ಸರ್ಕಾರಗಳ ಈ ನಡೆಯಿಂದ ಬೇಸರ ಉಂಟಾಗಿದೆ. ರಾಜ್ಯದಾದ್ಯಂತ ಸುಮಾರು 35 ಸಾವಿರ ಗುತ್ತಿಗೆದಾರರು ತಮ್ಮ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿಯಲಿದ್ದಾರೆ. ಮುಖ್ಯಮಂತ್ರಿ ಬಜೆಟ್‌ ಮಂಡಿಸುವ ಮುನ್ನವೇ ಗುತ್ತಿಗೆದಾರರ ಬಿಲ್‌ ಕುರಿತಾದ ಸ್ಪಷ್ಟ ಘೋಷಣೆ ಮಾಡಬೇಕು’ ಎಂದೂ ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಎಂ.ಕೆ. ಮುಲ್ಲಾ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.

ಈ ಹಿಂದಿನ ಸರ್ಕಾರದಂತೆ ಪ್ರಸಕ್ತ ಕಾಂಗ್ರೆಸ್‌ ಸರ್ಕಾರದಲ್ಲೂ ಬಿಲ್‌ ಪಾವತಿಗೆ ಕಮಿಷನ್‌ ನಿಗದಿ ಮಾಡಲಾಗಿದೆ. ವಿಳಂಬಕ್ಕೆ ಇದೂ ಕೂಡ ಕಾರಣ
ಆರ್.ಮಂಜುನಾಥ್, ಅಧ್ಯಕ್ಷ, ರಾಜ್ಯ ಕಾರ್ಯನಿರತ ಗುತ್ತಿಗೆದಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.