ADVERTISEMENT

ವಿಧಾನಪರಿಷತ್‌ಗೆ ಚುನಾವಣೆ: ಯಾರಿಗೆ ಟಿಕೆಟ್? ಕುತೂಹಲ, ಚರ್ಚೆ

ಚುನಾವಣೆ: ಎರಡೂ ಸ್ಥಾನಗಳಿಗೆ ಸ್ಪರ್ಧಿಸುವುದೇ ಬಿಜೆಪಿ?

ಎಂ.ಮಹೇಶ
Published 9 ನವೆಂಬರ್ 2021, 19:30 IST
Last Updated 9 ನವೆಂಬರ್ 2021, 19:30 IST
ಮಹಾಂತೇಶ ಕವಟಗಿಮಠ
ಮಹಾಂತೇಶ ಕವಟಗಿಮಠ   

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಚುನಾವಣೆ ದಿನಾಂಕ ಮಂಗಳವಾರ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ 2 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ, ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಗಡಿ ನಾಡು ಸಾಕ್ಷಿಯಾಗುವ ಸಾಧ್ಯತೆ ಇದೆ.

2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ (ಹಾಲಿ ವಿಧಾನಪರಿಷತ್ ಮುಖ್ಯಸಚೇತಕ) ಪುನರಾಯ್ಕೆಯಾಗಿದ್ದರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದ ವಿವೇಕರಾವ್ ಪಾಟೀಲ ಗೆದ್ದಿದ್ದರು. ಅವರ ಅಧಿಕಾರದ ಅವಧಿಯು 2022ರ ಜನವರಿ 5ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಡಿ.10ರಂದು ಚುನಾವಣೆಗೆ ಮುಹೂರ್ತ ನಿಗದಿಪಡಿಸಿದೆ.

ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಎರಡೂ ಸ್ಥಾನಗಳಿಗೂ ಸ್ಪರ್ಧಿಸುವರೇ ಅಥವಾ ಒಂದು ಸ್ಥಾನಕ್ಕಷ್ಟೆ ಅಭ್ಯರ್ಥಿ ಹಾಕುವರೇ ಎನ್ನುವ ಚರ್ಚೆ ಆರಂಭವಾಗಿದೆ.

ADVERTISEMENT

ಲೆಕ್ಕಾಚಾರ ತಲೆಕೆಳಗು:

ದಿಢೀರನೆ ಚುನಾವಣೆ ಘೋಷಣೆ ಆಗಿದೆಯಾದರೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ವಲಯದಲ್ಲಿ ಹಲವು ದಿನಗಳಿಂದಲೂ ಆಂತರಿಕವಾಗಿ ಸಿದ್ಧತೆಗಳು ಆರಂಭಗೊಂಡಿದ್ದವು. ಕಾಂಗ್ರೆಸ್‌ನವರು ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದರು. ಬಿಜೆಪಿಯವರೂ ತಯಾರಿಗಾಗಿ ಸಭೆ ನಡೆಸಿದ್ದರು. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯು ಮುಂಚೆ ಬರಬಹುದು ಎನ್ನುವ ನಿರೀಕ್ಷೆ ಅವರದಾಗಿತ್ತು. ಆದರೆ, ಚುನಾವಣಾ ಆಯೋಗದ ಘೋಷಣೆಯಿಂದಾಗಿ ಪಕ್ಷಗಳ ಲೆಕ್ಕಾಚಾರ ತಲೆಕೆಳಕಾಗಿದೆ.

ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಅವರು 3ನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ಹಲವು ತಿಂಗಳಿಂದಲೂ ಕ್ಷೇತ್ರದಾದ್ಯಂತ ಸಂಚರಿಸಿ ಪರೋಕ್ಷವಾಗಿ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದ್ದಾರೆ. ಆ ಪಕ್ಷದಲ್ಲಿ ಬೇರೆಯವರ ಹೆಸರು ಬಹಿರಂಗವಾಗಿ ಕೇಳಿಬಂದಿಲ್ಲ. ಎರಡೂ ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸಿದಲ್ಲಿ ಮತ್ತೊಬ್ಬರಿಗೆ ಟಿಕೆಟ್‌ ಸಿಗಬಹುದು.

ಹಲವು ಆಕಾಂಕ್ಷಿಗಳು:

ಕಾಂಗ್ರೆಸ್‌ನಿಂದ ವಿವೇಕರಾವ್ ಪಾಟೀಲ, ಪ್ರಕಾಶ ಹುಕ್ಕೇರಿ, ಕಳೆದ ಬಾರಿ ಸೋತಿದ್ದ ವೀರಕುಮಾರ ಪಾಟೀಲ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ, ಕಿರಣ ಸಾಧುನವರ ಮತ್ತು ಸುನೀಲ ಹನಮಣ್ಣವರ ಆಕಾಂಕ್ಷಿಗಳಾಗಿದ್ದಾರೆ. ಮೂವರ ಹೆಸರನ್ನು ಜಿಲ್ಲಾ ಘಟಕದಿಂದ ಕೆಪಿಸಿಸಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಚನ್ನರಾಜ ಹಟ್ಟಿಹೊಳಿ ಅವರು ದೀಪಾವಳಿ ಅಂಗವಾಗಿ ಗ್ರಾಮ ಪಂಚಾಯ್ತಿಗಳ ಸದಸ್ಯರಿಗೆ ಗ್ರೀಟಿಂಗ್‌ ಕಾರ್ಡ್‌ಗಳನ್ನು ಕಳುಹಿಸಿ ಶುಭಾಶಯ ಕೋರಿದ್ದರು. ಈ ನಡುವೆ, ಹೋದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಹಾಲಿ ಸದಸ್ಯ ವಿವೇಕರಾವ್ ಪಾಟೀಲ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಜೆಪಿ ವರಿಷ್ಠರು ಕವಟಗಿಮಠ ಅವರಿಗೆ ಮತ್ತೆ ಅವಕಾಶ ಕೊಡುವರೇ ಅಥವಾ ಹೊಸ ಮುಖಗಳಿಗೆ ಅನುವು ಮಾಡಿಕೊಡುವರೇ ಅಥವಾ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವರೇ ಎಂಬ ಚರ್ಚೆಗಳೂ ರಾಜಕೀಯ ವಲಯದಲ್ಲಿ ಶುರುವಾಗಿವೆ.

ಆಗ ಕಾಂಗ್ರೆಸ್, ಈಗ ಬಿಜೆಪಿ:

ಕಳೆದ ಚುನಾವಣೆ ಕಾಲಕ್ಕೆ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿದ್ದರು. ಆಗ, ಪಕ್ಷದ ಅಧಿಕೃತ ಅಭ್ಯರ್ಥಿ ವೀರಕುಮಾರ ಪಾಟೀಲ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿವೇಕರಾವ್ ಪಾಟೀಲ ಅವರಿಗೆ ಬೆಂಬಲ ನೀಡಿದ್ದರು; ಗೆಲ್ಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಈಗ ರಮೇಶ ಅವರು ಬಿಜೆಪಿಯಲ್ಲಿದ್ದಾರೆ. ಯಾರಿಗೆ ತಮ್ಮ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲವೂ ಜನರಲ್ಲಿದೆ. ವಿಧಾನಪರಿಷತ್‌ನಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ಬಿಜೆಪಿಯವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದರಿಂದಾಗಿ ಕಣವು ರಂಗೇರುವ ಸಾಧ್ಯತೆ ಇದೆ.

ಈಚೆಗೆ ನಡೆದ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಭೆಯಲ್ಲಿ, ಎರಡೂ ಸ್ಥಾನಗಳಿಗೆ ಸ್ಪರ್ಧಿಸಿದರೆ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಬಿಜೆಪಿ ಮುಖಂಡರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ಅಂತಿಮ ನಿರ್ಧಾರಕ್ಕೆ ಬರುವುದು ಇನ್ನೂ ಸಾಧ್ಯವಾಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ. ಎರಡೂ ಸ್ಥಾನಗಳಿಗೆ ಸ್ಪರ್ಧಿಸಿದರೆ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಆಗ ಗೆಲ್ಲುವುದು ಕಷ್ಟ. ಹೀಗಾಗಿ, ಒಂದೇ ಸ್ಥಾನಕ್ಕೆ ಗಮನ ಕೊಡಲಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮದೇ ಆದ ಮತ ಬ್ಯಾಂಕ್ ಇದೆ. ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿ ಕಳುಹಿಸಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

***

ನಮ್ಮ ಪರವಾದ ವಾತಾವರಣ

ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದವರನ್ನು ಸೋಲಿಸಿದವರು ಈಗ ಹೊರ ಹೋಗಿದ್ದಾರೆ. ಹೀಗಾಗಿ, ನಾವು ಆತಂಕಪಡುವ ಅಗತ್ಯವಿಲ್ಲ. ನಮ್ಮ ಪರವಾದ ವಾತಾವರಣ ಇದೆ.

–ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

***

ಆಕಾಂಕ್ಷಿಯಾಗಿದ್ದೇನೆ

ಮತ್ತೊಮ್ಮೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರೆಲ್ಲರಲ್ಲೂ ಮನವಿ ಮಾಡಿದ್ದೇನೆ, 12 ವರ್ಷಗಳ ಕೆಲಸ ಪರಿಗಣಿಸಿ ಅವಕಾಶ ಕೊಡುವ ನಿರೀಕ್ಷೆ ಇದೆ. ಸ್ಥಳೀಯ ಸಂಸ್ಥೆಗಳ ಸದಸ್ಯರ ದನಿಯಾಗಿ ಕೆಲಸ ಮಾಡಿದ್ದೇನೆ.

– ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಮುಖ್ಯಸಚೇತಕ

***

ಕಾಂಗ್ರೆಸ್‌ ಟಿಕೆಟ್ ಕೇಳಿರುವೆ

ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಹೋದ ಚುನಾವಣೆಯಲ್ಲೂ ಕೇಳಿದ್ದೆ; ಸಿಕ್ಕಿರಲಿಲ್ಲ. ಈ ಬಾರಿ ಸಿಗುವ ವಿಶ್ವಾಸವಿದೆ.

–ವಿವೇಕರಾವ್ ಪಾಟೀಲ, ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.