ADVERTISEMENT

ಸುತ್ತೂರು ಮಠಕ್ಕೆ ಹೋಗಿ ಬಂದ ನಂತರ ಮಾತನಾಡುವೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 7:31 IST
Last Updated 25 ಜೂನ್ 2021, 7:31 IST
ವಿಶೇಷ ವಿಮಾನದಲ್ಲಿ ಮೈಸೂರಿನ ಸುತ್ತೂರು ಮಠಕ್ಕೆ ತೆರಳಿದ ಶಾಸಕ ರಮೇಶ ಜಾರಕಿಹೊಳಿ ಮತ್ತು  ಲಖನ್‌ ಜಾರಕಿಹೊಳಿ
ವಿಶೇಷ ವಿಮಾನದಲ್ಲಿ ಮೈಸೂರಿನ ಸುತ್ತೂರು ಮಠಕ್ಕೆ ತೆರಳಿದ ಶಾಸಕ ರಮೇಶ ಜಾರಕಿಹೊಳಿ ಮತ್ತು ಲಖನ್‌ ಜಾರಕಿಹೊಳಿ    

ಬೆಳಗಾವಿ: ಸಚಿವ ಸಂಪುಟಕ್ಕೆ ಮತ್ತೆ ಸೇರಲು ಕಸರತ್ತು ನಡೆಸುತ್ತಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮುಂಬೈ ಪ್ರವಾಸದ ನಂತರ ಮಠಗಳಿಗೆ ಭೇಟಿಗೆ ಮುಂದಾಗಿದ್ದಾರೆ. ಮೈಸೂರಿನ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಲು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಶುಕ್ರವಾರ ತೆರಳಿದರು.

ಗೋಕಾಕದಿಂದ ಬಂದ ಅವರು, ಸಹೋದರ ಲಖನ್‌ ಜಾರಕಿಹೊಳಿ ಮತ್ತು ಅಳಿಯ ಅಂಬಿರಾವ ಪಾಟೀಲ ಜೊತೆ ಮೈಸೂರಿನತ್ತ ಪ್ರಯಾಣ ಬೆಳೆಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದ ರಮೇಶ, ‘ಸುತ್ತೂರು ಮಠದಿಂದ ಬಂದ ನಂತರ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದರು.

ADVERTISEMENT

ಲಖನ್‌ ಕೂಡ ಮಾತನಾಡಲಿಲ್ಲ. ‘ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯುವುದಕ್ಕೆ ಹೋಗುತ್ತಿದ್ದೇವೆ. ಬಳಿಕ ಅಣ್ಣನೇ ಎಲ್ಲವನ್ನೂ ತಿಳಿಸುತ್ತಾರೆ’ ಎಂದರು.

ಶ್ರೀಗಳ ಪೂರ್ವಾಶ್ರಮದ ತಾಯಿ ಈಚೆಗೆ ನಿಧನರಾದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ಸೌಜನ್ಯಯುತವಾಗಿ ಭೇಟಿಯಾಗಿ, ಆಶೀರ್ವಾದ ಪಡೆದು ಮುಂದಿನ ರಾಜಕೀಯ ನಡೆಯ ಬಗ್ಗೆಯೂ ರಮೇಶ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.