
ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮನ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಜತೆಗೆ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದರು.
ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಪೊಲೀಸರು ಮನವೊಲಿಸಿದರೂ ಪಟ್ಟು ಸಡಿಲಿಸದಿದ್ದಾಗ, ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಆಗ ಪರಸ್ಪರರ ಮಧ್ಯೆ ವಾಗ್ವಾದ ನಡೆಯಿತು.
ಮುಖಂಡರಾದ ವಾಜೀದ್ ಹಿರೇಕೋಡಿ, ಮಹಾಂತೇಶ ರಣಗಟ್ಟಿಮಠ ಇತರರಿದ್ದರು.
‘₹5 ಸಾವಿರ ನೀಡಬೇಕು’
‘ಈಗ ರೈತರು ಮಾಡುತ್ತಿರುವ ಹೋರಾಟವು 1980ರ ದಶಕದಲ್ಲಿ ನರಗುಂದ, ನವಲಗುಂದದಲ್ಲಿ ನಡೆದ ಹೋರಾಟ ನೆನಪಿಸುವಂತಿದೆ. ಪ್ರತಿ ಟನ್ ಕಬ್ಬು ನುರಿಸಿದಾಗ ಸಕ್ಕರೆ ಕಾರ್ಖಾನೆಯವರಿಗೆ ವಿವಿಧ ಮೂಲಗಳಿಂದ ₹14 ಸಾವಿರ ಆದಾಯ ಬರುತ್ತದೆ. ಹೀಗಿರುವಾಗ, ರೈತರ ಬೇಡಿಕೆಯಂತೆ ₹3,500 ದರ ನೀಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಟನ್ ಕಬ್ಬಿಗೆ ₹5 ಸಾವಿರ ದರವನ್ನು ಕಾರ್ಖಾನೆಯವರು ಕೊಡಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.