ಮಧು ಬಂಗಾರಪ್ಪ
ಬೆಳಗಾವಿ: ‘ರಾಜ್ಯದಲ್ಲಿ ಮೊದಲ ಹಂತದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ₹2,500 ಕೋಟಿ ಅನುದಾನ ಅಗತ್ಯ. ಈ ಸಂಬಂಧ ಎಡಿಬಿ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಲ್ಲ ಶಾಸಕರಿಗೂ ತಲಾ 2 ಅಥವಾ 3 ಶಾಲೆಗಳನ್ನು ನೀಡಲಾಗುವುದು. ಗ್ರಾಮ ಮಟ್ಟದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇದು ಪ್ರಮುಖ ಹೆಜ್ಜೆ’ ಎಂದರು.
‘ಮೂರು ವರ್ಷಗಳಲ್ಲಿ 13,500 ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿ ಆಗಿದೆ. ಶೀಗ್ರದಲ್ಲೇ 20 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು.
‘ಚುನಾವಣೆಯೂ ಸೇರಿದಂತೆ ಬೇರೆ ಯಾವುದೇ ಚಟುವಟಿಕೆಗೆ ಸರ್ಕಾರಿ ಶಾಲೆ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿದ್ದೇನೆ. ಶಿಕ್ಷಕರು ಶಾಲೆಯಲ್ಲೇ ಹೆಚ್ಚು ಚಟುವಟಿಕೆ ಆರಂಭಿಸಲು ಅನುಕೂಲ ಮಾಡಿಕೊಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದ್ವಿಭಾಷಾ ನೀತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ನಾನೊಬ್ಬನೇ ತೀರ್ಮಾಣ ಮಾಡುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಏನು ಬೇಕೋ ಅದನ್ನು ಮಾಡುತ್ತೇವೆ’ ಎಂದರು.
‘1995ರ ನಂತರದ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆದಿದೆ. ಹಣಕಾಸು ಇಲಾಖೆಗೂ ಪ್ರಸ್ತಾವ ಸಲ್ಲಿಸಿದ್ದೇವೆ. ಕನ್ನಡ ಶಾಲೆ ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ. ಈ ಹಿಂದೆ 2016ರವರೆಗಿನ ಶಾಲೆಗಳ ಪ್ರಸ್ತಾವ ಮಾತ್ರ ಇತ್ತು. ನಾವು 2020ರವರೆಗಿನ ಶಾಲೆಗಳನ್ನೂ ಪರಿಗಣಿಸಲು ಉದ್ದೇಶಿಸಿದ್ದೇವೆ. ಮುಂದಿನ ವರ್ಷಕ್ಕೆ ಸಾಧ್ಯವಾಗಬಹುದು’ ಎಂದೂ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.