ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರವೂ ಮಳೆ ಸುರಿಯಿತು.
ಬೆಳಗಾವಿಯಲ್ಲಿ ಸತತ ಎರಡನೇ ದಿನವೂ ಗುಡುಗು–ಮಿಂಚು ಸಹಿತವಾಗಿ ವರುಣ ಅಬ್ಬರಿಸಿದ್ದರಿಂದ ವಾತಾವರಣ ತಂಪೇರಿತು. ಬೆಳಿಗ್ಗೆಯಿಂದ ಮೋಡ ಕವಿದಿತ್ತು. ಸಂಜೆ ಒಂದು ತಾಸಿಗೂ ಅಧಿಕ ಉತ್ತಮ ಮಳೆ ಸುರಿಯಿತು.
ಕೆಲವು ಮಾರ್ಗಗಳ ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಯಿತು. ಭಾನುವಾರ ರಜಾ ದಿನವಾದ್ದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿತ್ತು. ಏಕಾಏಕಿ ಮಳೆಯಾಗಿದ್ದರಿಂದ ವ್ಯಾಪಾರ ವಹಿವಾಟಿಗೆ ತೊಡಕಾಯಿತು. ಜನರು ಆಶ್ರಯಕ್ಕಾಗಿ ಪರದಾಡಿದರು.
ಗೋಕಾಕ, ಬೈಲಹೊಂಗಲ ತಾಲ್ಲೂಕಿನ ನೇಸರಗಿ, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಮತ್ತಿತರ ಕಡೆ ಮಳೆಯಾಗಿದೆ.
ಧಾರಾಕಾರ ಮಳೆ: ನೆಲಕ್ಕುರುಳಿದ 25 ಮರ
ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ 25 ಮರಗಳು ಬಿದ್ದಿದ್ದು, 19 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಒಂದು ವಿದ್ಯುತ್ ಕಂಬ ಬಿದ್ದಿದ್ದರಿಂದ ಕಾರು ಜಖಂಗೊಂಡಿದೆ.
ಪಂಚಲಿಂಗೇಶ್ವರ ರೈತ ಸಂಪರ್ಕ ಕೇದ್ರದ ಗೋದಾಮಿನ ಪತ್ರಾಸ್ ಹಾರಿಹೋಗಿದ್ದು, 250 ಟನ್ ಗೊಬ್ಬರ ನೀರು ಪಾಲಾಗಿದೆ. ಪಪ್ಪಾಯಿ, ಬಾಳೆ, ಮೆಕ್ಕೆಜೋಳ, ಕಬ್ಬಿನ ಬೆಳೆಗೆ ಹಾನಿಯಾಗಿದೆ.
ಶಾಸಕ ವಿಶ್ವಾಸ ವೈದ್ಯ ಮತ್ತು ಅಧಿಕಾರಿಗಳು ಕೃಷಿಭೂಮಿಗೆ ತೆರಳಿ, ಬೆಳೆ ಹಾನಿ ಪರಿಶೀಲಿಸಿದರು. ‘ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.
ಮುನವಳ್ಳಿ ಬಳಿಯ ಜಮೀನಿನಲ್ಲಿ ಮಳೆಯಿಂದ ಬಾಳೆ ಬೆಳೆ ಹಾನಿಗೀಡಾಗಿರುವುದನ್ನು ಶಾಸಕ ವಿಶ್ವಾಸ ವೈದ್ಯ ಪರಿಶೀಲಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.