ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ಬುಧವಾರ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಕಂಗೊಳಿಸಿದ್ದು ಹೀಗೆ –ಪ್ರಜಾವಾಣಿ ಚಿತ್ರ
ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದ ಸಡಗರ ಹೊಳೆಯಾಗಿ ಹರಿಯಿತು. ನಗರದ ಮೂಲೆಮೂಲೆಯಿಂದ, ಹಳ್ಳಿ– ಪಟ್ಟಣಗಳಿಂದ ಅಪಾರ ಸಂಖ್ಯೆಯ ಗಡಿ ಭಾಗದ ಕನ್ನಡಿಗರು ಬಂದು ಸೇರಿದರು. ಎತ್ತ ನೋಡಿದರೂ ಜನವೋ ಜನ. ಹಳದಿ– ಕೆಂಪು ಬಾವುಟಗಳ ಹಾರಾಟ, ಶಲ್ಯಗಳ ತೂರಾಟ, ಎದೆ ನಡುಗಿಸುವಂಥ ಸಂಗೀತಕ್ಕೆ ಯುವಪಡೆಗಳ ನಿರಂತರ ನರ್ತನ...
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಾಕ್ಷಾತ್ ಕನ್ನಡ ಕುಲದೇವಿ ಭುವನೇಶ್ವರಿಯೇ ಅವತರಿಸಿದಳು ಎಂಬಷ್ಟು ಸಂಭ್ರಮ ಮೂಡಿತು. ನಗರದ ಎಲ್ಲ ದಿಕ್ಕುಗಳಿಂದಲೂ ಬಂದ ಮೆರವಣಿಗೆ ತಂಡಗಳು ಇಲ್ಲೇ ಸಮಾವೇಶಗೊಂಡವು. ಪುಟಾಣಿ ಮಕ್ಕಳಿಂದ ಹಿಡಿದು, ಯುವತಿಯರು, ಯುವಕರು, ಮಹಿಳೆಯರು, ಹಿರಿಯರು ಕೂಡ ಕನ್ನಡಮ್ಮನ ತೇರು ಎಳೆದರು. ನಾಡಗೀತೆ, ರಂಗಗೀತೆ, ಜನಪದ ಹಾಡು, ಸಿನಿಗೀತೆಗಳು ಮೊಳಗಿದವು.
ಒಂದೆಡೆ ಸ್ತಬ್ಧಚಿತ್ರಗಳ ಮೆರವಣಿಗೆ, ಮತ್ತೊಂದೆಡೆ ಯುವಜನರ ಹಾಡು– ಕುಣಿತ. ನಗರದ ಪ್ರತಿ ಮನೆಯ ಮುಂದೆ, ಬೀದಿಬೀದಿಗಳಲ್ಲಿ ಕನ್ನಡ ಬಾವುಟಗಳ ಸಾಲು, ರಂಗೋಲಿಗಳ ಸಿಂಗಾರ ಕಂಡುಬಂತು.
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಭುವನೇಶ್ವರಿಯ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಪಂಪ, ರನ್ನ, ಪೊನ್ನ, ಚಂಪ, ಇಮ್ಮಡಿ ಪುಲಿಕೇಶಿ, ಮಹರ್ಷಿ ವಾಲ್ಮೀಕಿ, ಅಕ್ಕ ಮಹಾದೇವಿ, ಶ್ರೀಕೃಷ್ಣದೇವರಾಯ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಪುನೀತ್ ರಾಜ್‌ಕುಮಾರ್, ಚಿನ್ನದ ಅಂಬಾರಿ, ನಾಲ್ವಡಿ ಕೃಷ್ಣರಾಜ ಒಡೆಯರ, ಯಕ್ಷಗಾನ, ದೈವದ ಕೋಲದ ರೂಪಕಗಳು ಕಣ್ಮನ ಸೆಳೆದವು.
ಸಂಘಟನೆಗಳ ಯುವಕರು ಲಾರಿ, ಟ್ರ್ಯಾಕ್ಟರ್, ಟೆಂಪೊಗಳನ್ನು ಅಲಂಕಾರ ಮಾಡಿ, ಡಾಲ್ಬಿಗಳನ್ನು ಕಟ್ಟಿಕೊಂಡು, ಕಣ್ಣುಕೋರೈಸುವ ವಿದ್ಯುದ್ದೀಪಾಲಂಕಾರ ಮಾಡಿ, ಹಾಡಿ– ಕುಣಿದು ಸಂಭ್ರಮಿಸಿದರು. ಸೈಕಲ್, ಬೈಕು, ಆಟೊಗಳ ಮಾಲೀಕರು ಕನ್ನಡಮ್ಮನ ಭಾವಚಿತ್ರ ಮೆರವಣಿಗೆ ಮಾಡಿದರು.
ಪೌರಾಣಿಕ ಪಾತ್ರಗಳು, ಇತಿಹಾಸ ಪುರುಷರ ವೇಷ ಧರಿಸಿದ ಯುವಜನರು, ಮಕ್ಕಳು ಆಕರ್ಷಣೆಯ ಕೇಂದ್ರವಾದರು. ನಗರದ ಎಲ್ಲ ದ್ವಿಮುಖ ರಸ್ತೆಗಳಲ್ಲೂ ಕಿಕ್ಕಿರಿದು ಸೇರಿದ್ದ ಜನ ಫೋಟೊ, ಸೆಲ್ಫಿ ಸೆರೆಹಿಡಿದುಕೊಂಡರು. ಮಾರ್ಗದಲ್ಲಿ ಹಲವು ಜನ ಕುಡಿಯುವ ನೀರು, ಮಜ್ಜಿಗೆ, ಪಲಾವ್, ವಡಾಪಾವ್, ಭಡಂಗ್ ಮುಂತಾದ ತಿಂಡಿಗಳನ್ನು ಕರೆದುಕೊಟ್ಟರು.
ತಡರಾತ್ರಿಯೇ ಸಂಭ್ರಮ: ಮಂಗಳವಾರ ರಾತ್ರಿಯೇ ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಜನ ಸೇರಿದ್ದರು. ವೃತ್ತಕ್ಕೆ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಿದ್ದನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಉದ್ಘಾಟಿಸಿದರು. ಕಣ್ಮನ ಸೆಳೆಯುವ ದೀಪಾಲಂಕಾರದೊಂದಿಗೆ ಚಿತ್ರ ತೆಗೆಸಿಕೊಳ್ಳಲು ತಡರಾತ್ರಿ 2ರ ಸುಮಾರಿಗೂ ಹಲವು ಜನ ಮುಗಿಬಿದ್ದರು.
3,000ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಕೈಗೊಂಡರು. 300 ಸಿಸಿಟಿವಿ ಕ್ಯಾಮೆರಾ ಹಾಗೂ ಹಲವು ಡ್ರೋನ್‌ಗಳನ್ನು ಅಳವಡಿಸಿ ಹದ್ದಿನ ಕಣ್ಣಿಟ್ಟು ಕಾದರು. ಬೆಳಿಗ್ಗೆ 11ಕ್ಕೆ ಆರಂಭವಾದ ಮೆರವಣಿಗೆ ತಡರಾತ್ರಿಯವರೆಗೆ ಮುಂದುವರಿಯಿತು. ಈ ಬಾರಿಯ ಮೆರವಣಿಗೆಗೆ 4 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
‘ವಿಶ್ವ ಕನ್ನಡ ಸಮ್ಮೇಳನ ಸಾಧ್ಯತೆ ವಿರಳ’
ದಾವಣಗೆರೆ: ರಾಜ್ಯದಲ್ಲಿ ತೀವ್ರ ಬರ ಆವರಿಸಿರುವುದರಿಂದ ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸಾಧ್ಯತೆ ವಿರಳವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಮುಂಬರುವ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ಬುಧವಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.