ಬೆಳಗಾವಿ: ‘ಲಕ್ಷಾಂತರ ಕನ್ನಡಿಗರು ಸೇರಿ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕರ್ನಾಟಕ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಪ್ರತಿವರ್ಷ ₹2 ಕೋಟಿ ಅನುದಾನ ನೀಡಬೇಕು. ನಾಡವಿರೋಧಿ ಚಟುವಟಿಕೆ ಕೈಗೊಳ್ಳುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅನ್ನು ರಾಜ್ಯದಲ್ಲಿ ನಿಷೇಧಿಸಬೇಕು’ ಎಂದು ಕನ್ನಡ ಹೋರಾಟಗಾರರು ಒತ್ತಾಯಿಸಿದರು.
ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಗಡಿ ಹಿತ ಕಾಪಾಡಲು ರಚಿಸಿರುವ ಆಯೋಗ ಮತ್ತು ಪ್ರಾಧಿಕಾರಗಳು ಮೂರು ತಿಂಗಳಿಗೊಮ್ಮೆ ಬೆಳಗಾವಿಯಲ್ಲಿ ಸಭೆ ನಡೆಸಿ, ಕನ್ನಡಿಗರ ಅಹವಾಲು ಕೇಳಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ, ‘ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗಳನ್ನು ಸುವರ್ಣ ವಿಧಾನಸೌಧದಲ್ಲಿ ಆರಂಭಿಸಲು ಸರ್ಕಾರ ಕ್ರಮ ವಹಿಸಬೇಕು. ಇದರಿಂದ ಗಡಿ ಕನ್ನಡಿಗರ ಅಹವಾಲುಗಳನ್ನು ಬೇಗ ಬಗೆಹರಿಸಲು ಮತ್ತು ಮನವಿ ಸಲ್ಲಿಕೆಗಾಗಿ ಕನ್ನಡಿಗರು ರಾಜಧಾನಿಗೆ ಹೋಗುವುದು ತಪ್ಪುತ್ತದೆ’ ಎಂದರು.
‘ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನ್ನಡ ಜಾಗೃತಿ ಸಮಿತಿ ರಚಿಸಿ, ಅದರ ಪದಾಧಿಕಾರಿಗಳಿಗೆ ಕೆಡಿಪಿ ಸಭೆಗಳಿಗೆ ಹಾಜರಾಗಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಮಹಾದೇವ ತಳವಾರ, ‘ರಾಜ್ಯದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ 4 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಕ್ಕೆ ಮುಂದಾಗಿರುವ ಸರ್ಕಾರ ಸರಿಯಲ್ಲ. ಇದರ ಬದಲಿಗೆ ಕನ್ನಡ ಶಾಲೆಗಳನ್ನೇ ಸಬಲೀಕರಣಗೊಳಿಸುವ ಕೆಲಸವಾಗಬೇಕು. ಅವುಗಳಿಗೆ ಶೌಚಗೃಹ ಸೇರಿ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ಗಡಿಯಲ್ಲಿ ಕನ್ನಡದ ಉಳಿವಿಗೆ ಹೋರಾಟ ಮಾಡಿದವರಿಗೆ ಪೊಲೀಸರಿಂದ ರೌಡಿಶೀಟರ್ ಪಟ್ಟಿ, ಕೇಸು ಹಾಕುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಕನ್ನಡ ಹೋರಾಟಗಾರರ ಮೇಲೆ ದಾಖಲಿಸಿದ ಕೇಸುಗಳನ್ನು ರದ್ದುಪಡಿಸಬೇಕು. ಕರ್ನಾಟಕದಲ್ಲಿ ಎಂಇಎಸ್ ನಿಷೇಧಿಸಬೇಕು. ಜತೆಗೆ ಕನ್ನಡಕ್ಕೆ ಧಕ್ಕೆ ತರುವವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.
‘ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳ ಜತೆ ಸುಧೀರ್ಘವಾಗಿ ಸಭೆ ನಡೆಸುತ್ತೇವೆ’ ಎಂದು ಪುರುಷೋತ್ತಮ ಬಿಳಿಮಲೆ ಭರವಸೆ ಕೊಟ್ಟರು.
ಪ್ರಾಧಿಕಾರದ ಸದಸ್ಯ ಸಂತೋಷ ಹಾನಗಲ್ಲ ಮಾತನಾಡಿದರು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.
ಕೇಳಿಬಂದ ಇತರೆ ಬೇಡಿಕೆಗಳು:
* ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಬೇಕು.
* ಅಂಗಡಿ–ಮುಂಗಟ್ಟುಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಆದ್ಯತೆ ಮೇಲೆ ಕನ್ನಡ ಬಳಸದವರ ವಿರುದ್ಧ ಕ್ರಮವಾಗಬೇಕು.
* ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರು ನಾಮಕರಣ ಮಾಡಬೇಕು.
* ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಸರನ್ನು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವೆಂದು ಬದಲಿಸಬೇಕು.
* ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.