ADVERTISEMENT

ಬೆಳಗಾವಿ: ವೈಯಕ್ತಿಕ ಭೇಟಿ ಮೂಲಕ ಕವಟಗಿಮಠ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 15:48 IST
Last Updated 25 ನವೆಂಬರ್ 2021, 15:48 IST
ಮಹಾಂತೇಶ ಕವಟಗಿಮಠ
ಮಹಾಂತೇಶ ಕವಟಗಿಮಠ   

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಯಲ್ಲಿ ಗೋಕಾಕದ ಉದ್ಯಮಿ ಲಖನ್‌ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸಿರುವುದು ಬಿಜೆಪಿಗೂ ತಲೆನೋವಾಗಿ ಪರಿಣಮಿಸಿದೆ. ‘ವ್ಯತಿರಿಕ್ತ ಪರಿಣಾಮ’ ಸಾಧ್ಯತೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಕಾರ್ಯತಂತ್ರ ರೂಪಿಸುವ ಕಾರ್ಯಕ್ಕೆ ಬಿಜೆ‍ಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಗುರುವಾರ ಮೊರೆ ಹೋದರು.

ಯಾವುದೇ ಬಹಿರಂಗ ಪ್ರಚಾರ ಸಭೆಯನ್ನೂ ಅವರು ನಡೆಸಲಿಲ್ಲ. ಬದಲಿಗೆ, ಮತದಾರರು ಹಾಗೂ ಮುಖಂಡರನ್ನು ವೈಯಕ್ತಿಕವಾಗಿ ಭೇಟಿಯಾಗಿ ಪ್ರಚಾರ ನಡೆಸಿದರು. ಲಖನ್‌ ಸ್ಪರ್ಧೆಯಿಂದ ಆಗಬಹುದಾದ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಮತ ವಿಭಜನೆ ಆಗದಂತೆ ನೋಡಿಕೊಳ್ಳಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದರು. ಪಕ್ಷಕ್ಕೆ ಮುಜುಗರ ಉಂಟಾಗುವ ಫಲಿತಾಂಶ ಬಾರದಂತೆ ನಿಗಾ ವಹಿಸಬೇಕು ಎಂದು ಸೂಚ್ಯವಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಜೊತೆಗೆ, ಲಖನ್‌ ಜಾರಕಿಹೊಳಿ ಕಣದಿಂದ ಹಿಂದೆ ಸರಿಯುವಂತೆಯೂ ಪ್ರಯತ್ನ ನಡೆಸಿದ್ದಾರೆ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ವಾಪಸ್ ಪಡೆಯಲು ನ.26 ಕೊನೆ ದಿನವಾಗಿದೆ. ಲಖನ್ ನಿರ್ಧಾರದ ಮೇಲೆ ಕಣದಲ್ಲಿನ ಚಿತ್ರಣ ನಿರ್ಧಾರವಾಗಲಿದೆ. ಈ ನಡುವೆ, ಪಕ್ಷದ ವರಿಷ್ಠರು ಕೂಡ ಲಖನ್ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ಇದು ಸಫಲವಾಗುವುದೋ ಇಲ್ಲವೋ ಎನ್ನುವುದು ಶುಕ್ರವಾರ ಗೊತ್ತಾಗಲಿದೆ.

ADVERTISEMENT

ಮಂಗಲಾ ಪ್ರಚಾರ:ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಬೆಂಬಲ ಕೋರಿ ಸಂಸದೆ ಮಂಗಲಾ ಅಂಗಡಿ ಅವರು ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಮತ ಯಾಚಿಸಿದರು.

‘ಗ್ರಾಮ ಪಂಚಾಯಿತಿಗಳ ಏಳಿಗೆಗೆ ಕವಟಗಿಮಠ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರ ಜನಪರ ಕಾರ್ಯಗಳು ಅನನ್ಯ. ಸದಾ ಸಾಮಾಜಿಕ ಹಾಗೂ ಜನಹಿತ ಕೆಲಸಗಳಿಗೆ ಸ್ಪಂದಿಸುವ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು’ ಎಂದು ಕೋರಿದರು.

ರಾಜೇಶ್ವರಿ ಕವಟಗಿಮಠ, ಸುಷ್ಮಿತಾ ಕವಟಗಿಮಠ, ಮುಖಂಡರಾದ ಧನಂಜಯ ಜಾಧವ್, ಧನಶ್ರೀ ಸರ್‌ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.