
ಖಾನಾಪುರ: ‘ಪಟ್ಟಣದ ಹೊರವಲಯದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಗೆ ಸುಸಜ್ಜಿತ ಕಟ್ಟಡ, ತರಬೇತಿ ಕೇಂದ್ರ, ಸಭಾಗೃಹ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ₹11.83 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಂಸ್ಥೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ‘ಇದು ಕುಂಬಾರಿಕೆ ಕ್ಷೇತ್ರದಲ್ಲಿ ಕೌಶಲ ತರಬೇತಿ ನೀಡುವ ದಕ್ಷಿಣ ಭಾರತದ ಏಕೈಕ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಕೇಂದ್ರದಿಂದ ಬಹುದೊಡ್ಡ ಆರ್ಥಿಕ ನೆರವು ಘೋಷಣೆಯಾಗಿದೆ ’ ಎಂದರು.
‘ಕಳೆದ ಬಾರಿ ಖಾನಾಪುರಕ್ಕೆ ಬಂದಾಗ ಈ ಭಾಗದ ಬಿಜೆಪಿ ಮುಖಂಡ ಪ್ರಮೋದ ಕೊಚೇರಿ ಸಂಸ್ಥೆಯ ವಿಶೇಷತೆ ಬಗ್ಗೆ ತಿಳಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆಗ ಸಂಸ್ಥೆಯ ಶಿಥಿಲ ಕಟ್ಟಡವನ್ನು ವೀಕ್ಷಿಸಿ ಕಟ್ಟಡದ ಅವಸ್ಥೆಯ ಬಗ್ಗೆ ಅರಿತು ದೆಹಲಿಗೆ ಹೋದ ನಂತರ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರ ಗಮನಕ್ಕೆ ತರಲಾಗಿತ್ತು. ಈ ತರಬೇತಿ ಕೇಂದ್ರವನ್ನು ಸುಧಾರಿಸಲು ಸಚಿವರು ಅನುದಾನ ಬಿಡುಗಡೆಗೊಳಿಸಿದ್ದಾರೆ’ ಎಂದರು.
ಪ್ರಮೋದ ಕೊಚೇರಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಬರುವಂತಹ ತರಬೇತಿಗಳನ್ನು ನೀಡುವ ಕೇಂದ್ರವಾಗಿ ವ್ಯವಸ್ಥಿತವಾಗಿ ರೂಪಿಸಲು ಇಂತಹ ಯೋಜನೆಗಳು ಪೂರಕವಾಗಲಿದೆ’ ಎಂದರು.
ಸಿವಿಪಿಐ ಪ್ರಾಚಾರ್ಯ ವಿಜಯೇಂದ್ರ ಸಿಂಗ್, ಹಿರಿಯ ಅಧಿಕಾರಿ ಎಸ್.ಎನ್. ದೇಶಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.