ADVERTISEMENT

ಅಪಹರಣ, ದರೋಡೆ: 8 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 15:42 IST
Last Updated 3 ಮಾರ್ಚ್ 2023, 15:42 IST
ರಾಮದುರ್ಗ ತಾಲ್ಲೂಕಿನಲ್ಲಿ ನಡೆದ ಎರಡು ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡ ಕಾರು, ಚಿನ್ನಾಭರಣಗಳೊಂದಿಗೆ ಪೊಲೀಸರು
ರಾಮದುರ್ಗ ತಾಲ್ಲೂಕಿನಲ್ಲಿ ನಡೆದ ಎರಡು ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡ ಕಾರು, ಚಿನ್ನಾಭರಣಗಳೊಂದಿಗೆ ಪೊಲೀಸರು   

ರಾಮದುರ್ಗ: ಇಲ್ಲಿನ ಸ್ಟೀಲ್‌ ವ್ಯಾಪಾರಿ ಅಪಹರಣ ಮತ್ತು ಬನ್ನೂರಿನ ಮನೆಯೊಂದಕ್ಕೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮದುರ್ಗ ಮತ್ತು ಕಟಕೋಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 8 ಜನರನ್ನು ಬಂಧಿಸಿದ್ದಾರೆ.

ಈ ಎರಡೂ ಪ್ರಕರಣಗಳನ್ನು ಕೈಗೆತ್ತಿಕೊಂಡ ಕಟಕೋಳ ಮತ್ತು ರಾಮದುರ್ಗದ ಪೊಲೀಸರು ತಂಡಗಳನ್ನು ರಚಿಸಿ ತನಿಖೆಗೆ ಮುಂದಾಗಿದ್ದರು. ಒಟ್ಟು 8 ಜನ ಆರೋಪಿಗಳು ಬಂಧಿಸಿ ಅವರಿಂದ 188 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ನಾಲ್ಕು ಕಾರುಗಳು ಮತ್ತು ಎರಡು ಮೋಟಾರ್‌ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಮದುರ್ಗದ ರಾಮದೇವ ಸ್ಟೀಲ್‌ಮಾಲೀಕ ಮುಖೇಶಕುಮಾರ ಸ್ವಾಲಕಾ ಎಂಬುವರನ್ನು 2023ರ ಫೆ.8 ರಂದು ಅಪಹರಿಸಿಕೊಂಡು ಹೋಗಿದ್ದರು. ಅವರಿಗೆ ದೈಹಿಕ ಹಿಂಸೆ ನೀಡಿ ₹1.05 ಲಕ್ಷ ನಗದು, ಚಿನ್ನಾಭರಣ ಮತ್ತು ಮೊಬೈಲ್‌ ಕಸಿದುಕೊಂಡು ಹೋಗಿದ್ದರು.

ADVERTISEMENT

ಇನ್ನೊಂದು ಪ್ರಕರಣದಲ್ಲಿ, ತಾಲ್ಲೂಕಿನ ಬನ್ನೂರಿನ ಚಂದ್ರು ಶಂಕರ ರಜಪೂತ ಎಂಬುವವರ ಮನೆಗೆ ನುಗ್ಗಿ ಮನೆಮಂದಿಗೆ ಥಳಿಸಿ ಮನೆಯಲ್ಲಿದ್ದ ₹ 23.69 ಲಕ್ಷ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿ ಫರಾರಿಯಾಗಿದ್ದರು.

ರಾಮದುರ್ಗ ತಾಲ್ಲೂಕಿನ ಓಬಳಾಪೂರ ಆರ್‌ಎಲ್‌ಟಿ ತಾಂಡೆಯ ವಿಜಯ ಲಮಾಣಿ, ಭಾಗ್ಯನಗರ (ಸುನ್ನಾಳ)ದ ಫಿರ್ದೋಶಿ ನಜೀರ ಉಸ್ತಾದ, ಜಮಖಂಡಿಯ ಮೂಲದ ಮುಕ್ತಾರ ಸಾಧಿಕ್‌ ಶೇಖ್‌, ಜಮೀರ ಹಬೀಬ ರೆಹಮಾನ್‌ ಮುನಸಿ, ಖಾದರ್‌ ಲತೀಪಸಾಬ್‌ ಕಡ್ಲಿಮಟ್ಟಿ, ಕಲಾದಗಿ ಮೂಲದ ಮಹ್ಮದ್‌ ಕೈಫ್‌ ಉರ್ಪ್‌ ಕಲ್ಪನಾ ಕೊಡಕಿ, ಮಹ್ಮದ್‌ ಹುಸೇನ್‌ ಮೈಬೂಸಾಬ್‌ ಶೇಖ್‌ ಮತ್ತು ಬಿಜಾಪೂರದ ಅರಕೇರಿ ಮೂಲಕ ಕಾಶೀಮಸಾಬ್‌ ಬಾಬುಸಾಬ್‌ ಶೇಖ್‌ ಅವರನ್ನು ಬಂಧಿಸಿ ನ್ಯಾಯಂಗದ ಮುಂದೆ ಹಾಜರು ಪಡಿಸಿದ್ದಾರೆ.

ಪ್ರಕರಣ ಬೇಧಿಸುವಲ್ಲಿ ರಾಮದುರ್ಗದ ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ರಾಮದುರ್ಗದ ಪಿಎಸ್‌ಐ ಶಿವಾನಂದ ಕಾರಜೋಳ, ಕಟಕೋಳದ ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಸಿಬ್ಬಂದಿಗಳಾದ ಎಲ್‌.ಟಿ. ಪವಾರ, ವೈ.ಜಿ. ಕೋಟಿ, ಡಿ.ಎಚ್‌. ನದಾಫ್‌, ಎಂ.ಎಂ. ಪಡಸಲಗಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದರು.

ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ರಾಮದುರ್ಗದ ಡಿಎಸ್ಪಿ ರಾಮನಗೌಡ ಹಟ್ಟಿ ಮತ್ತು ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಅವರನ್ನು ಎಸ್ಪಿ ಡಾ.ಸಂಜೀವ ಪಟೀಲ ಮೆಚ್ಚುಗೆ ವ್ಯಕ್ತ ಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.