ADVERTISEMENT

ಕೃಷಿ ಕಾಯ್ದೆಗಳ ವಿರುದ್ಧ ಬೆಳಗಾವಿಯಲ್ಲಿ ನಡೆದಿತ್ತು ‘ರೈತ ಮಹಾಪಂಚಾಯತ್’

ಮೋದಿ ಬದಲಾಗದಿದ್ದರೆ, ಸರ್ಕಾರ ಬದಲಾಯಿಸ್ತೀವಿ ಎಂದು ಎಚ್ಚರಿಕೆ ನೀಡಿದ್ದರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 7:18 IST
Last Updated 19 ನವೆಂಬರ್ 2021, 7:18 IST
   

ಬೆಳಗಾವಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಇಲ್ಲಿ ನಡೆದಿದ್ದ ‘ರೈತ ಮಹಾಪಂಚಾಯತ್’ನಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ಕೃಷಿಕರು ರವಾನಿಸಿದ್ದರು.

ಅಖಿಲ‌ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಾರ್ಚ್‌ 31ರಂದು ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಹಾಪಂಚಾಯತ್‌ನಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ತೀವ್ರ ಆಕ್ರೋಶವ ವ್ಯಕ್ತಪಡಿಸಿದ್ದರು. ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಶಾಸನಬದ್ಧಗೊಳಿಸಬೇಕು ಎಂದು ಆಗ್ರಹಿಸಿದ್ದರು.

ರಾಣಿ ಚನ್ನಮ್ಮ ವೃತ್ತದಿಂದ ಸಿಪಿಇಡಿ ಕಾಲೇಜು ಮೈದಾನದವರೆಗೆ ನಡೆದಿದ್ದ ಮೆರವಣಿಗೆಯಲ್ಲಿ ರೈತ ಮಹಿಳೆಯರು ಕುಂಭಗಳನ್ನು ಹೊತ್ತು ಪಾಲ್ಗೊಂಡಿದ್ದರು. ದೆಹಲಿಯಿಂದ ಬಂದಿದ್ದ ನಾಯಕರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಗಿತ್ತು. ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ‘ಹಸಿರು ಕಹಳೆ’ ಮೊಳಗಿಸಿದ್ದರು. ಹಸಿರು ಬಾವುಟಗಳು ರಾರಾಜಿಸಿದ್ದವು.

ADVERTISEMENT

ಬಿರುಬಿಸಿಲಿನಲ್ಲೇ ಸಮಾವೇಶ ನಡೆದಿತ್ತು. ಪೆಂಡಾಲ್ ಹಾಕಲು ಅನುಮತಿ ಕೊಡದ ಸರ್ಕಾರದ ವಿರುದ್ಧ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ‘ಸರ್ಕಾರವನ್ನು ಬಿಸಿಲಿಗೆ ತಂದು ನಿಲ್ಲಿಸುವವರೆಗೂ ನಾವು ವಿಶ್ರಮಿಸಬಾರದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ. ಗಂಗಾಧರ ಕರೆ ನೀಡಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್, ‘ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು. ಇದಕ್ಕಾಗಿ ನಾವು ಅನುಮತಿ ಪಡೆದು ಹೋರಾಡುತ್ತಿಲ್ಲ. ಪೊಲೀಸರು ಅಶ್ರುವಾಯು ಪ್ರಯೋಗಿಸುವಂತೆ ನಮ್ಮ ಹೋರಾಟ ಇರಬೇಕು. ಒಂದು ಊರು, ಒಂದು ಟ್ರ್ಯಾಕ್ಟರ್, 15 ಹಾಗೂ 10 ದಿನ ಫಾರ್ಮುಲಾ ಅನುಸರಿಸಬೇಕು. ಸರದಿಯಲ್ಲಿ ಚಳವಳಿ ನಡೆಸಬೇಕು. ಯಾವುದಕ್ಕೂ ಹೆದರಬೇಕಿಲ್ಲ. ಪೊಲೀಸರು ಬ್ಯಾರಿಕೇಡ್ ಹಾಕಿದರೆ, ನೀವು ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿರಿ’ ಎಂದು ತಿಳಿಸಿದ್ದರು.

‘ಪೊಲೀಸರ ಬ್ಯಾರಿಕೇಡ್‍ಗಳನ್ನು ಮುರಿದು ನಾವು ಮುನ್ನುಗ್ಗಬೇಕು. ಯಾವಾಗ ರೈತರ ಚಳವಳಿ ತೀವ್ರವಾಗುತ್ತದೆಯೋ ಆಗ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. 2021–ರೈತ ಹೋರಾಟದ ವರ್ಷ. ಇದಕ್ಕೆ ನೀವೂ ಕೈಜೋಡಿಸಬೇಕು’ ಎಂದು ಇಲ್ಲಿನ ರೈತರನ್ನು ಹುರಿದುಂಬಿಸಿದ್ದರು.

ನಾಯಕ ಯುದ್ಧವೀರ್‌ ಸಿಂಗ್‌, ‘ಅದಾನಿ, ಅಂಬಾನಿ ಈ ದೇಶ ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಅದನ್ನು ಆ ಪಕ್ಷದ ಕಾರ್ಯಕರ್ತರು ಅರಿಯಬೇಕು. ಈಗಿರುವುದು ನರೇಂದ್ರ ಮೋದಿ ಸರ್ಕಾರ. ಚುನಾವಣೆಯಲ್ಲಿ ಹೇಳಿರಲಿಲ್ಲವೇ, ಈ ಬಾರಿ ಮೋದಿ ಸರ್ಕಾರ ಎಂದು? ಅವರು ಅದಾನಿ ಹಾಗೂ ಅಂಬಾನಿಗಾಗಿ ದಲಾಲರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಖಾಸಗೀಕರಣ ಮಾಡುವ ಷಡ್ಯಂತ್ರ ನಡೆಸಿದ್ದಾರೆ’ ಎಂದು ಟೀಕಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರೇ ಇನ್ನಾದರೂ ಬದಲಾಗಿ. ಇಲ್ಲವೇ ನಾವು ಸರ್ಕಾರವನ್ನು ಬದಲಾಯಿಸುತ್ತೇವೆ’ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ಎಚ್ಚರಿಕೆ ನೀಡಿದ್ದರು. ಇದಕ್ಕೆ ನೆರೆದಿದ್ದ ರೈತರೆಲ್ಲರೂ ಬೆಂಬಲ ನೀಡಿದ್ದರು.

‘ರೈತರ ಭೂಮಿ ಕಸಿದುಕೊಳ್ಳಲು, ಕಂಪನಿಗಳು ಹೇಳಿದಷ್ಟು ರೇಟ್‌ಗೆ ಕೊಡಬೇಕು ಎನ್ನುವುದು ಹಾಗೂ ಗ್ರಾಹಕರ ಸುಲಿಗೆ ಮಾಡುವ ಕಾನೂನುಗಳನ್ನು ತಂದಿರುವುದು ಸರಿಯಲ್ಲ. ಮೋದಿ ಗೆಲ್ಲಿಸಿ ಬಹಳ ದೊಡ್ಡ ತಪ್ಪು ಮಾಡಿದ್ದೇವೆ. ಇಂಥ ಕಾನೂನುಗಳನ್ನು ಮಾಡುತ್ತೇವೆ ಎಂದಿದ್ದರೆ ನಾವು ಬೆಂಬಲಿಸುತ್ತಿರಲಿಲ್ಲ. ನಿಮ್ಮ‌ ವಿರುದ್ಧ ಹೋರಾಟ ರೂಪಿಸುತ್ತಿದ್ದೆವು’ ಎಂದು ಗುಡುಗಿದ್ದರು.

‘ಇದು 2ನೇ ಸ್ವಾತಂತ್ರ್ಯ ಚಳವಳಿ. ಇದರಲ್ಲಿ ಗೆಲ್ಲದಿದ್ದರೆ ರೈತರು ಹಾಗೂ ಬಡವರು ಗುಲಾಮಗಿರಿಯಲ್ಲೇ ಇರಬೇಕಾಗುತ್ತದೆ’ ಎಂದು ಮುಖಂಡ ಬಿ.ಆರ್. ಪಾಟೀಲ ಎಚ್ಚರಿಸಿದ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ. ಗಂಗಾಧರ, ನಾಯಕರಾದ ಚುಕ್ಕಿ ನಂಜುಂಡಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮೊದಲಾದವರು, ಮುಖಂಡರಾದ ಮಧುಸೂದನ್ ತಿವಾರಿ, ಶಂಕರ ಅಂಬಲಿ, ಎಸ್. ಪಡಸಲಗಿ, ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೀಕರ, ಮುಖಂಡರಾದ ಚೂನಪ್ಪ ಪೂಜಾರಿ, ಸಿದಗೌಡ ಮೋದಗಿ, ಜಯಶ್ರೀ ಗುರನ್ನವರ ಪಾಲ್ಗೊಂಡಿದ್ದರು.

ರೈತ ಸಂಘದವರು ಬಸವ ಕಲ್ಯಾಣದಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆಯಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ರೈತರ ಸ್ಮಾರಕ ನಿರ್ಮಾಣಕ್ಕೆ ಬಳಸಲೆಂದು ಬಿ.ಆರ್‌. ಪಾಟೀಲ ಅವರು ರಾಕೇಶ್ ಟಿಕಾಯತ್ ಅವರಿಗೆ ಹಸ್ತಾಂತರಿಸಿದ್ದರು.

ಈ ಸಮಾವೇಶ ಸಂಘಟಿಸುವಲ್ಲಿ ನೇತೃತ್ವ ವಹಿಸಿದ್ದವರಲ್ಲಿ ಪ್ರಮುಖರಾಗಿದ್ದ ಬಾಬಾಗೌಡ ಪಾಟೀಲ ಹಾಗೂ ಕಲ್ಯಾಣರಾವ್ ಮುಚಳಂಬಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.