ADVERTISEMENT

ಮಲಿನಗೊಂಡ ಕೆರೆ: ರಕ್ಷಣೆಗೆ ಮೊರೆ

ಐತಿಹಾಸಿಕ ರಣಗಟ್ಟಿಕೆರೆ ಸ್ವಚ್ಛತೆಗೆ ಆಗ್ರಹ

ಪ್ರದೀಪ ಮೇಲಿನಮನಿ
Published 29 ಆಗಸ್ಟ್ 2024, 5:44 IST
Last Updated 29 ಆಗಸ್ಟ್ 2024, 5:44 IST
ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ರಣಗಟ್ಟಿ ಕೆರೆ ಬಳಿ ಯುವಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು 
ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ರಣಗಟ್ಟಿ ಕೆರೆ ಬಳಿ ಯುವಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು    

ಚನ್ನಮ್ಮನ ಕಿತ್ತೂರು: ‘ಕೆರೆ ಬಳಿ ತಂದು ಕಸದ ಗುಂಪೆ ಹಾಕುತ್ತಾರೆ. ದಂಡೆ ಪಕ್ಕದಲ್ಲಿ ಶೌಚ ಮತ್ತು ಮೂತ್ರ ಮಾಡುತ್ತಾರೆ. ಮಾನವರ ಸತತ ಮಲೀನತೆಯ ‘ದಾಳಿ’ಗೆ ಒಳಗಾಗಿರುವ ಇಲ್ಲಿನ ಗುರುವಾರ ಪೇಟೆಯ ಐತಿಹಾಸಿಕ ರಣಗಟ್ಟಿ ಕೆರೆ ತನ್ನ ರಕ್ಷಣೆಗೆ ಮೊರೆ ಇಡುವಂತೆ ಭಾಸವಾಗುತ್ತಿದೆ’ ಎನ್ನುತ್ತಾರೆ ಜನರು.

‘ಈ ಕೆರೆಗೂ ಒಂದು ಐತಿಹಾಸಿಕ ಹಿನ್ನೆಲೆಯಿದೆ. ಕ್ರಾಂತಿನೆಲದ ರಕ್ತಲೇಪಿತ ಖಡ್ಗವನ್ನು ಇದೇ ನೀರಿನಲ್ಲಿ ತೊಳೆಯುತ್ತಿದ್ದರು. ಹಾವು ಕಡಿದರೆ ಇಲ್ಲಿನ ನೀರು ಕುಡಿಯಲು ಕೊಡುತ್ತಿದ್ದರು. ಒಂದು ಕಾಲಕ್ಕೆ ಔಷಧಿಯ ಗುಣ ಹೊಂದಿರುವ ಈ ಕೆರೆಯ ನೀರನ್ನು ಮಲೀನತೆಯ ಹೊಂಡವಾಗಿ ನಾಗರಿಕ ವ್ಯವಸ್ಥೆಯು ಪರಿವರ್ತನೆ ಮಾಡಿದೆ’ ಎಂದು ಅವರು ದೂರುತ್ತಾರೆ.

‘ಹಲವು ದಶಕಗಳ ಹಿಂದೆ ಕೆರೆ ಬಳಿ ಇರುವ ಕೊಂಡವಾಡ ಚೌಕದಲ್ಲಿ ವಾಸಿಸುವ ಜನರು ಬಳಕೆಗೆ, ಬಟ್ಟೆ ತೊಳೆಯಲು, ಭತ್ತ ಕುದಿಸಿ, ಚುರಮರಿ ಹುರಿಯಲಿ ಇದೇ ನೀರು ಬಳಸುತ್ತಿದ್ದರು. ಈಗ ಕೆರೆ ಕಡೆಗೆ ತಿರುಗಿ ನೋಡದಂತಾಗಿದೆ. ಕೆರೆ ಬಳಿ ಹೋದರೆ ದುರ್ವಾಸನೆ ಮೂಗಿಗೆ ಅಡರುತ್ತದೆ’ ಎಂದು ಆರೋಪಿಸುತ್ತಾರೆ.

ADVERTISEMENT

‘ಚರಂಡಿ ನಿರ್ಮಾಣವಾದ ನಂತರ ಹೊಲಸು ನೀರನ್ನು ಕೆರೆ ಅಂಗಳಕ್ಕೆ ಹರಿಸಲು ಸ್ಥಳೀಯ ಅಂದಿನ ಗ್ರಾಮ ಆಡಳಿತ ಮುಂದಾಯಿತು. ಚರಂಡಿ ಮೂಲಕ ಶೌಚದ ನೀರೂ ಬಂದು ಸೇರಿಕೊಂಡಿತು. ಹಾಗಾಗಿ ಇಲ್ಲಿನ ನೀರು ಹೆಚ್ಚು ಮಲೀನವಾಯಿತು. ಹರಿಯದೆ ನಿಂತ ನೀರು ಕೊಳಚೆ ರೂಪ ಪಡೆದುಕೊಂಡು ನಿಲ್ಲಲು ಕಾರಣವಾಯಿತು’ ಎಂದು ಅಲ್ಲಿ ವಾಸಿಸುವ ಅಕ್ಕಪಕ್ಕದ ನಿವಾಸಿಗಳು ತಿಳಿಸಿದರು.

‘ಸುಮಾರು ಐದು ಎಕರೆ ಪ್ರದೇಶದಲ್ಲಿರುವ ಈ ಕೆರೆಗೆ ಚರಂಡಿ ನೀರು ಹರಿಯದಂತೆ ನೋಡಿಕೊಳ್ಳಬೇಕು ಅಥವಾ ಚರಂಡಿ ನೀರು ಸಂಸ್ಕರಿಸಿ ಕೆರೆಯೊಡಲಿಗೆ ಹರಿಸುವ ಕೆಲಸವಾಗಬೇಕು. ಇದರಿಂದ ಬಳಕೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅವರು.

ಐತಿಹಾಸಿಕ ರಣಗಟ್ಟಿ ಕೆರೆ ಪ್ರದೇಶ ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವೆ ಮುಗಿದ ನಂತರ ಕೆರೆ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
–ಬಾಬಾಸಾಹೇಬ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.