ADVERTISEMENT

ಕಿತ್ತೂರು ಉತ್ಸವ: ತಾಳೆ ಬೆಳೆದವನು ಬಾಳಿಯಾನು

ರೈತರ ಚಿತ್ತ ಸೆಳೆದ ತಾಳೆ ಬೆಳೆ ಪ್ರಾತ್ಯಕ್ಷಿಕೆ, ಫಲ–ಪುಷ್ಪ ಪ್ರದರ್ಶನ

ಸಂತೋಷ ಈ.ಚಿನಗುಡಿ
Published 25 ಅಕ್ಟೋಬರ್ 2025, 4:49 IST
Last Updated 25 ಅಕ್ಟೋಬರ್ 2025, 4:49 IST
ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಆಯೋಜಿಸಿದ್ದ ತಾಳೆ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಲಕ್ಷ್ಮೀ ಸಂಗಪ್ಪ ಕಲ್ಲೂರ ಅವರು ರೈತರಿಗೆ ಮಾಹಿತಿ ನೀಡಿದರು  ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಆಯೋಜಿಸಿದ್ದ ತಾಳೆ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಲಕ್ಷ್ಮೀ ಸಂಗಪ್ಪ ಕಲ್ಲೂರ ಅವರು ರೈತರಿಗೆ ಮಾಹಿತಿ ನೀಡಿದರು  ಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು: ‘ತಾಳಿದವನು ಬಾಳಿಯಾನು’ ಎಂಬ ಗಾದೆ ಮಾತಿದೆ. ಅದನ್ನು ಈಗ ‘ತಾಳೆ ಬೆಳೆದವನು ಬಾಳಿಯಾನು’ ಎಂದೂ ಹೇಳಬಹುದು. ಅಷ್ಟರಮಟ್ಟಿಗೆ ದೇಶದಲ್ಲಿ ತಾಳೆಗೆ ಬೇಡಿಕೆ ಬೆಳೆದಿದೆ. ಇದರ ಸಾಕ್ಷಾತ್‌ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮೋಡಬೇಕೆಂದರೆ ನೀವು ಕಿತ್ತೂರು ಉತ್ಸವಕ್ಕೆ ಬರಬೇಕು.

ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ತೋಟಗಾರಿಕಾ ಇಲಾಖೆ ಹಾಗೂ 3F ಆಯಿಲ್ ಪಾಮ್‌ ಆಶ್ರಯದಲ್ಲಿ ಆಯೋಜಿಸಿದ ಫಲ–ಪುಷ್ಪ ಪ್ರದರ್ಶನದಲ್ಲಿ ಈ ತಾಳೆ ಬೆಳೆಯ ಮಾಹಿತಿ ನೀಡಲಾಗಿದೆ. ಈ ಬಾರಿಯ ಪ್ರದರ್ಶನವನ್ನು ಜನಾಕರ್ಷಣೆಗಿಂತ ಜನೋಪಯೋಗಿ ಮಾಡಲು ಆದ್ಯತೆ ನೀಡಲಾಗಿದೆ.

ತಾಳೆಯ ಬೀಜಗಳು, ಸಸಿಮಡಿಗಳು, ಮಾರುದ್ದ ಬೆಳೆದ ಸಸಿಗಳು, ಫಲಿತ ತಾಳೆ, ಅದರ ಕಾಯಿಗಳು, ತಯಾರಿಸಲಾದ ಎಣ್ಣೆಗಳು, ನಾರು, ಇತರ ಕಚ್ಚಾವಸ್ತುಗಳು, ಔಷಧೋಪಚಾರ, ಬೆಳೆಯುವ ವಿಧಾನ, ಸರ್ಕಾರದಿಂದ ಸಿಗುವ ಸೌಲಭ್ಯಗಳು... ಎಲ್ಲವನ್ನೂ ಪ್ರದರ್ಶಿಸಲಾಗಿದೆ.

ADVERTISEMENT

‘ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಖಾದ್ಯತೈಲ ಅಭಿಯಾನ (ತಾಳೆ ಬೆಳೆ) ಯೋಜನೆಯ ಭಾಗವಾಗಿ ಇಲ್ಲಿ ರೈತರಿಗೆ ಉಪಯುಕ್ತ ಮಳಿಗೆ ಹಾಕಲಾಗಿದೆ. ನಮ್ಮ ದೇಶವು ತಾಳೆ ತೈಲನ್ನು ಅತ್ಯಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಇಲ್ಲಿನ ಹವಾಮಾನ ಹಾಗೂ ಮಣ್ಣಿನಗುಣ ತಾಳೆ ಕೃಷಿಗೆ ಹೇಳಿ ಮಾಡಿಸಿದಂತಿದೆ. ಸರ್ಕಾರದಿಂದ ಇದಕ್ಕೆ ಸಾಕಷ್ಟು ರಿಯಾಯಿತಿ, ಸೌಕರ್ಯ, ಮಾರ್ಗದರ್ಶನವೂ ಇದೆ. ರೈತರು ಮನಸ್ಸು ಮಾಡಿದರೆ ಆದಾಯ ದುಪ್ಪಟ್ಟು ಮಾಡಿಕೊಳ್ಳಬಹುದು’ ಎಂದು ಕಿತ್ತೂರು ಆರ್‌ಎಸ್‌ಕೆ ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮಿ ಸಂಗಪ್ಪ ಕಲ್ಲೂರ ‘ಪ್ರಜಾವಾಣಿ’ಗೆ ತಿಳಿದರು.

ತಾಳೆ ಎಣ್ಣೆ ಆರೋಗ್ಯಕ್ಕೂ ಉತ್ತಮ. ಇದನ್ನು ಬೆಳೆಯಲು ಒಂದು ಎಕರೆ ಹೊಲ ಸಾಕು. ಒಬ್ಬನೇ ವ್ಯಕ್ತಿ ನಿರ್ವಹಣೆ ಮಾಡಬಹುದು. ನೀರಾವರಿ ಹಾಗೂ ಗೊಬ್ಬರ ಬಿಟ್ಟರೆ ಬೇರೇನೂ ಖರ್ಚು ಇಲ್ಲ. ಒಮ್ಮೆ ಬೆಳೆದರೆ ಮೂರು ವರ್ಷದ ನಂತರ ಫಲ ಬಿಡಲು ಆರಂಭಿಸುತ್ತದೆ. ಪ್ರತಿ 15 ದಿನಕ್ಕೊಮ್ಮೆ ಇಳುವರಿ ಪಡೆಯಬಹುದು. ಇದರ ಮರ ಕನಿಷ್ಠ 35 ವರ್ಷಗಳ ವರೆಗೆ ರೈತ ಕುಟುಂಬವನ್ನು ಸಲಹುತ್ತದೆ.

ಒಂದು ಎಕರೆ ಬೆಳೆಯಲು ₹10 ಸಾವಿರ ಸಾಕು. ಎಕರೆಗೆ ಕನಿಷ್ಠ 10 ಟನ್‌ನಿಂದ 24 ಟನ್‌ವರೆಗೂ ಫಲ ಸಿಗುತ್ತದೆ. ಇದರ ಅಡುಗೆ ಎಣ್ಣೆಯಲ್ಲಿ ‘ಡಿ’ ಮತ್ತು ‘ಇ’ ವಿಟಮಿನ್‌ಗಳು ಹೇರಳವಾಗಿರುತ್ತವೆ. ಹೋಟೆಲ್, ರೆಸ್ಟಾರೆಂಟ್‌ ಹಾಗೂ ಕಲ್ಯಾಣ ಮಂಟಪಗಳಲ್ಲಿ ಅಡುಗೆ ಮಾಡುವವರಿಗೂ ಇದು ಹೆಚ್ಚು ಉಪಯುಕ್ತ. ಖಾದ್ಯತೈಲ ಮಾತ್ರವಲ್ಲದೇ ವನಸ್ಪತಿ, ಸಾಬೂನು, ಗ್ಲೀಸರಿನ್, ಪ್ಯಾರಾಫಿನ್‌ ತಯಾರಿಕೆಯಲ್ಲೂ ಇದು ಬಳಕೆಯಾಗುತ್ತದೆ. ಹೀಗಾಗಿ, ದೇಶದೆಲ್ಲೆಡೆ ಬೇಡಿಕೆ ಹೆಚ್ಚಿದೆ.

ರೈತರಿಗೆ ಉಚಿತವಾಗಿ ಸಸಿ ವಿತರಿಸಿ, ಪ್ರತಿ ವರ್ಷ, ಪ್ರತಿ ಹೆಕ್ಟೇರ್‌ಗೆ ಇಂತಿಷ್ಟು ಸಹಾಯಧನ ಕೂಡ ನೀಡಲಾಗುತ್ತದೆ. ಇದರೊಂದಿಗೆ ತೋಟಗಾರಿಕೆ ಇಲಾಖೆಯಿಂದ ಬರುವ ಯಂತ್ರೋಪಕರಣ ಖರೀದಿಗೆ ಸಹಾಯ, ಎರೆಹುಳು ಘಟಕ, ಮಳೆ ನೀರು ಕೊಯ್ಲು ಮುಂತಾದವುಗಳಿಗೂ ಆರ್ಥಿಕ ನೆರವು ಇದೆ ಎಂದು ಬೈಲಹೊಂಗಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶೀಲಾ‌ ಮುರಗೋಡ ಹಾಗೂ ಕಂಪನಿಯ ವ್ಯವಸ್ಥಾಪಕ ಸಂದೀಪ ಗೌಡ ಕೂಡ ಮಾಹಿತಿ ನೀಡಿದರು.

ಆಸಕ್ತ ರೈತರು ಮೊ.9686569385, 8884295455 ಸಂಪರ್ಕಿಸಬಹುದು.

ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಏರ್ಪಡಿಸಿದ ಫಲ– ಪುಷ್ಪ ಪ್ರದರ್ಶನದಲ್ಲಿ ಆನೆ ಅಂಬಾರಿ ಮೇಲೆ ಚನ್ನಮ್ಮನ ಪ್ರತಿಮೆ ಇಟ್ಟು ಆಕರ್ಷಕ ಮಾಡಲಾಗಿದೆ  ಪ್ರಜಾವಾಣಿ ಚಿತ್ರ

ಆನೆ ಅಂಬಾರಿ ಮೇಲೆ ಚನ್ನಮ್ಮ ಕಿತ್ತೂರು

ಕೋಟೆ ಆವರಣದಲ್ಲಿ ಏರ್ಪಡಿಸಿದ್ದ ಫಲ– ಪುಷ್ಪ ಪ್ರದರ್ಶನದಲ್ಲಿ ಆನೆ– ಅಂಬಾರಿ ಅತ್ಯಂತ ಆಕರ್ಷಕವಾಗಿದೆ. ಮೈಸೂರು ದಸರಾದಲ್ಲಿ ಆನೆಯ ಮೇಲೆ ಚಿನ್ನದ ಅಂಬಾರಿ ಇಟ್ಟು ಅದರಲ್ಲಿ ಚಾಮುಂಡಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ಇಲ್ಲಿ ಹೂವಿನ ಆನೆ– ಅಂಬಾರಿ ಮೇಲೆ ರಾಣಿ ಚನ್ನಮ್ಮನ ಪ್ರತಿಮೆ ಇಟ್ಟು ಆಕರ್ಷಣೀಯ ಮಾಡಲಾಗಿದೆ. ಉತ್ಸವ ನೋಡಲು ತಂಡೋಪ ತಂಡವಾಗಿ ಬರುವ ಜನ ಈ ಆನೆ– ಅಂಬಾರಿ ಮುಂದೆ ನಿಂತು ಫೋಟೊ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಇದರೊಂದಿಗೆ ವಿವಿಧ ನಮೂನೆಯ ಹಣ್ಣುಗಳು ಬಣ್ಣಬಣ್ಣದ ಹೂವುಗಳು ಚೆಲುವಾಂತ ಸಸಿಗಳನ್ನೂ ಪ್ರದರ್ಶಿಸಲಾಗಿದೆ. ಹಿಡಕಲ್‌ ತೋಟಗಾರಿಕಾ ಕ್ಷೇತ್ರದಿಂದ ಸಸ್ಯ ಸಂತೆ ಏರ್ಪಡಿಸಿದ್ದು ಸಸಿಗಳ ಮಾರಾಟವೂ ನಡೆದಿದೆ. ಕುಳ್ಳ ದೇಹದ ಬೊನ್ಸಾಯ್‌ ಗಿಡಗಳು ಕುತೂಹಲ ಮೂಡಿಸುತ್ತಿವೆ. ಕಡಿಮೆ ಜಾಗದಲ್ಲೇ ಮಾಡಬಹುದಾದ ‘ವರ್ಟಿಕಲ್‌ ಉದ್ಯಾನ’ ಹಾಗೂ ಸಿರಿಧಾನ್ಯಗಳ ಕರ್ನಾಟಕ ನಕಾಶೆ ಮಾದರಿ ಇಲ್ಲಿನ ವಿಶೇಷ.

ಸದ್ಯ ಸರ್ಕಾರ ಟನ್‌ ತಾಳೆಗೆ ₹14489 ಬೆಂಬಲ ಬೆಲೆ ಘೋಷಣೆ ಮಾಡಿದೆ. ಮಾರುಕಟ್ಟೆಯಲ್ಲೂ ₹16520 ದರವಿದೆ. ಒಂದು ವೇಳೆ ರೈತರಿಗೆ ಹಾನಿಯಾದರೆ ಸರ್ಕಾರ ಸಹಾಯ ಧನ ಭರಿಸುತ್ತದೆ
–ಲಕ್ಷ್ಮಿ ಸಂಗಪ್ಪ, ಕಲ್ಲೂರ ಸಹಾಯಕ ತೋಟಗಾರಿಕೆ ಅಧಿಕಾರಿ ಆರ್‌ಎಸ್‌ಕೆ ಕಿತ್ತೂರು
3F ಆಯಿಲ್ ಪಾಮ್‌ ಕಂಪನಿಯ ಜತೆಗೆ ಒಡಂಬಡಿಕೆ ಮಾಡಿಕೊಂಡರೆ ರೈತರ ಹೊಲಕ್ಕೇ ಬಂದು ಮಾರ್ಗದರ್ಶನ ಮಾಡುತ್ತೇವೆ. ಇಳುವರಿನ್ನೂ ನಾವೇ ಖರೀದಿಸುತ್ತೇವೆ
–ಸಿದ್ದು ಕುಂದರಗಿ, ಕ್ಲಸ್ಟರ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.