ಚನ್ನಮ್ಮನ ಕಿತ್ತೂರು: ‘ಈ ಬಾರಿ ಕಾಟಾಚಾರದ ಉತ್ಸವ ಮಾಡಬಾರದು. ಯೋಜನಾಬದ್ಧವಾಗಿ ವಿವಿಧ ಕಾರ್ಯಕ್ರಮ ನಡೆಸಿ, ಅಚ್ಚುಕಟ್ಟಾಗಿ ರಾಜ್ಯಮಟ್ಟದ ರೀತಿಯಲ್ಲಿ ಉತ್ಸವ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.
ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ ನಡೆಯಿತು.
‘ಪ್ರತಿಸಲದ ಪೂರ್ವಭಾವಿ ಸಭೆಯಲ್ಲಿ ನಮ್ಮ ಸಲಹೆ ಕೇಳಲಾಗುತ್ತದೆಯೇ ಹೊರತು, ಹಲವು ಅನುಷ್ಠಾನಕ್ಕೆ ಬರುವುದಿಲ್ಲ. ಹಾಗಾಗಿ ಉತ್ಸವದ ಯಶಸ್ಸಿನ ನಿಟ್ಟಿನಲ್ಲಿ ಜನರು ನೀಡಿದ ಪ್ರತಿ ಸಲಹೆ ಅನುಷ್ಠಾನಕ್ಕೆ ತರಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸುವ ಕಲಾವಿದರ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡಬೇಕು. ಜತೆಗೆ, ಕಳೆದ ವರ್ಷದ ಕಲಾವಿದರೇ ಪುನಾರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಒತ್ತಾಯಿಸಿದರು.
‘ರಾಷ್ಟ್ರೀಯ ಹೆದ್ದಾರಿ ಬದಿ ಇರುವ ರಾಣಿ ಚನ್ನಮ್ಮನ ಪುತ್ಥಳಿಯಿಂದ ಕೋಟೆಯವರೆಗೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು. ಕೋಟೆ ಆವರಣದಲ್ಲಿ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಇನ್ನೂ ವೇದಿಕೆ ಕಾರ್ಯಕ್ರಮಗಳಲ್ಲಿ ಬಳಸುವ ಧ್ವನಿವರ್ಧಕ ವ್ಯವಸ್ಥೆ ಉತ್ತಮವಾಗಿರಬೇಕು’ ಎಂದು ಆಗ್ರಹಿಸಿದರು.
‘ವಿವಿಧ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ತಡಮಾಡದೆ ಬಿಲ್ ಪಾವತಿಸಬೇಕು. ಕಿತ್ತೂರಿಗೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಕಾಕತಿಯಲ್ಲಿ ಇರುವ ವಾಡೆ, ಚನ್ನಮ್ಮನ ಮನೆಯನ್ನು ಸಂರಕ್ಷಿಸಬೇಕು’ ಎಂದು ಮನವಿ ಮಾಡಿದರು.
‘ಉತ್ಸವಕ್ಕೆ ಎರಡೇ ವಾರ ಬಾಕಿ ಇರುವಾಗ ತರಾತುರಿಯಲ್ಲಿ ಪೂರ್ವಭಾವಿ ಸಭೆ ನಡೆಸಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖಂಡ ಹಬೀಬ್ ಶಿಲೇದಾರ, ‘ಮುಂದಿನ ವರ್ಷ ಮೂರು ತಿಂಗಳ ಮುಂಚೆ ಶಾಸಕರ ನೇತೃತ್ವದಲ್ಲಿ ಮತ್ತು ಒಂದು ತಿಂಗಳು ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ಸವದ ಪೂರ್ವಭಾವಿ ಸಭೆ ಕರೆದು ಚರ್ಚಿಸಬೇಕು. ಹಲವು ಇಲಾಖೆಗಳ ಕಚೇರಿಗಳು ಇನ್ನೂ ಕಿತ್ತೂರಿಗೆ ಬಂದಿಲ್ಲ. ಕಿತ್ತೂರು ಪೂರ್ಣಪ್ರಮಾಣದ ತಾಲ್ಲೂಕು ಆಗಬೇಕಾದರೆ, ಎಲ್ಲ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಚಿಕ್ಕನಂದಿಹಳ್ಳಿ ಚಂದ್ರಗೌಡ, ‘ಬಾಕಿ ಉತ್ಸವ: ‘ಕಿತ್ತೂರು ಉತ್ಸವ ಎಂದರೆ, ಬಾಕಿ ಇಟ್ಟುಕೊಳ್ಳುವ ಉತ್ಸವ ಎಂದು ಹೆಸರಾಗಿದೆ. ಈ ಬಾರಿಯಾದರೂ ಬಾಕಿ ಮುಕ್ತ ಉತ್ಸವ ಆಚರಿಸಬೇಕು’ ಎಂದು ಆಗ್ರಹಿಸಿದರು.
ಪ್ರವೀಣ ಸರದಾರ, ‘ಉತ್ಸವದಲ್ಲಿ ನಡೆಯುವ ಎಲ್ಲ ಕಾಮಗಾರಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಟೆಂಡರ್ ಆಹ್ವಾನಿಸಿಯೇ, ಎಲ್ಲ ಕಾಮಗಾರಿಗಳನ್ನು ನೀಡಬೇಕು’ ಎಂದು ಮನವಿ ಮಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ ಕಂಬಾರ, ‘ಉತ್ಸವದಲ್ಲಿ ನಡೆಯುವ ವಿಚಾರಗೋಷ್ಟಿ ಉಸ್ತುವಾರಿಯನ್ನು ರಾಣಿ ಚನ್ನಮ್ಮ ವಿ.ವಿಗೆ ನೀಡಬೇಕು. ಕಿತ್ತೂರು ಸಂಸ್ಥಾನದ ಜತೆಗೆ ಕಿತ್ತೂರು ಕರ್ನಾಟಕದ ಕೈಗಾರಿಕೆ ಅಭಿವೃದ್ಧಿ, ನೀರಾವರಿ ಸೌಲಭ್ಯ ಕುರಿತು ಚಿಂತನೆ ಗೋಷ್ಠಿಗಳೂ ನಡೆಯಬೇಕು’ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಕಳೆದ ವರ್ಷ ಸಾರ್ವಜನಿಕರು ನೀಡಿದ್ದ ಶೇ 90ರಷ್ಟು ಸಲಹೆ ಅನುಷ್ಠಾನಗೊಳಿಸಿ, ಯಶಸ್ವಿಯಾಗಿ ಉತ್ಸವ ಆಚರಿಸಿದ್ದೆವು. ಉತ್ಸವ ಕೊನೇ ದಿನ ರಾತ್ರಿ 4 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈ ಬಾರಿಯೂ ಸಂಭ್ರಮದಿಂದ ಉತ್ಸವ ಆಚರಿಸಲಾಗುವುದು’ ಎಂದರು.
‘ಕಾಕತಿಯಲ್ಲಿ ಇರುವ ಚನ್ನಮ್ಮನ ಮನೆಯು ಮಾಲ್ಕಿ ಜಮೀನಾಗಿದೆ. ನೇರವಾಗಿ ಮಾತುಕತೆ ನಡೆಸಿ, ಖರೀದಿ ಪ್ರಕ್ರಿಯೆ ಕೈಗೊಳ್ಳಲು ಆಗುತ್ತಿಲ್ಲ. ಹಾಗಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಇದೇವೇಳೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ರೂಪಿಸಿದ ‘ನಮ್ಮ ಚಿತ್ತ ಶತಕದತ್ತ’ ಕೈಪಿಡಿ ಬಿಡುಗಡೆಗೊಳಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಸಿದ್ಧರಾಮ ಮಾರಿಹಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ, ತಹಶೀಲ್ದಾರ್ ಕಲಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಕೆ.ಎಚ್.ಚನ್ನೂರ ಇತರರಿದ್ದರು.
ರಾಜ್ಯದಲ್ಲೇ ಮಾದರಿ ಉತ್ಸವ ಆಚರಿಸುತ್ತೇವೆ: ಸಚಿವ ಜಾರಕಿಹೊಳಿ
‘ಈ ಬಾರಿ ಕಿತ್ತೂರು ಉತ್ಸವಕ್ಕೆ ₹5 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದ್ದೇವೆ. ಹಿಂದಿನ ಉತ್ಸವದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು, ಈ ಬಾರಿ ರಾಜ್ಯದಲ್ಲೇ ಮಾದರಿ ಉತ್ಸವ ಆಚರಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಉತ್ಸವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡುತ್ತೇವೆ. ಮುಖ್ಯವೇದಿಕೆ ಜತೆಗೆ, ವಿವಿಧ ಸಮನಾಂತರ ವೇದಿಕೆಗಳಲ್ಲೂ ಕಾರ್ಯಕ್ರಮ ನಡೆಸುತ್ತೇವೆ. ಆದರೆ, ಸಾರ್ವಜನಿಕರೂ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಕೋರಿದರು.
ಸ್ಥಳೀಯರಿಗೆ ಆದ್ಯತೆ: ಪಾಟೀಲ
‘ಯಾವ ತೊಂದರೆಯೂ ಆಗದಂತೆ ಈ ಸಲ ಯಶಸ್ವಿಯಾಗಿ ಉತ್ಸವ ಆಚರಿಸಲಾಗುವುದು. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಅ.23ರಂದು ಮಧ್ಯಾಹ್ನ 12ಕ್ಕೆ ಜಾನಪದ ಕಲಾವಾಹಿನಿ ಮೆರವಣಿಗೆಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
‘ಕಿತ್ತೂರು ಉತ್ಸವದ ಪ್ರಯುಕ್ತ, ವಿವಿಧ ಸಮಿತಿ ರಚಿಸಲಾಗಿದೆ. ಅವುಗಳ ಸಭೆ ಕರೆದು ಚರ್ಚಿಸಿ, ಉತ್ಸವಕ್ಕೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದರು.
‘ನಾಡಿನ ಉತ್ಸವವಾಗಿ ಆಚರಿಸಿ: ರಾಜಯೋಗೀಂದ್ರ ಸ್ವಾಮೀಜಿ
ಈ ಉತ್ಸವವನ್ನು ಕಿತ್ತೂರಿಗೆ ಸೀಮಿತವಾಗಿಸದೆ, ನಾಡಿನ ಉತ್ಸವವಾಗಿ ಆಚರಿಸಬೇಕು’ ಎಂದು ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ತಿಳಿಸಿದರು.
‘ಉತ್ಸವದ ಮೂಲಕ ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕು. ವಿವಿಧ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಉತ್ಸವದ ಯಶಸ್ಸಿಗೆ ಸಹಕರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.