ಸವದತ್ತಿ: ರಾಜ್ಯ ಮಟ್ಟದ ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯವ್ಯಾಪಿ ಸಂಚರಿಸಿದ ರಾಣಿ ಚನ್ನಮ್ಮರ ವೀರ ಜ್ಯೋತಿಗೆ ಇಲ್ಲಿನ ಎಪಿಎಂಸಿ ವೃತ್ತದಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ತಾಲ್ಲೂಕು ಆಡಳಿತದಿಂದ ಭಾನುವಾರ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.
ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘1857ರ ಸಿಪಾಯಿ ದಂಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಇತಿಹಾಸದ ಪುಟದಲ್ಲಿ ಉಲ್ಲೇಖವಿದೆ. ಆದರೆ 1824ರಲ್ಲಿ ಬ್ರಿಟಿಷರ ದೈತ್ಯ ಸೈನ್ಯವನ್ನು ಪರಾಭವಗೊಳಿಸಿ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾಗಿ ಮಿಂಚಿದವರು ರಾಣಿ ಚನ್ನಮ್ಮ’ ಎಂದರು.
‘ಭಾರತವನ್ನು ಆವರಿಸಿದ್ದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಮೊದಲ ಬಾರಿ ಯುದ್ಧ ಸಾರಿ ಜಯಗಳಿಸಿದ ಕೀರ್ತಿ ಕಿತ್ತೂರಿನ ರಾಣಿ ಚನ್ನಮ್ಮ ಅವರಿಗೆ ಸಲ್ಲುತ್ತದೆ. ಕಪ್ಪ ಕಾಣಿಕೆ ನೀಡದೇ ಪರಕೀಯರ ಹಂಗು ತೊರೆದು ವೀರಾವೇಶದಿಂದ ಯುದ್ಧದಲ್ಲಿ ಭಾಗಿಯಾದರು. ಅಂದು ಸಣ್ಣ ಸೈನ್ಯದೊಂದಿಗೆ ಸ್ವರಾಜ್ಯಕ್ಕಾಗಿ ಹವಣಿಸಿದ ಧೀರ ಮಹಿಳೆ ರಾಣಿ ಚನ್ನಮ್ಮ ಅವರು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿ ಹಾಗೂ ಮಹಿಳಾ ಸಬಲೀಕರಣದ ಸಂಕೇತ’ ಎಂದು ಹೇಳಿದರು.
ಎಪಿಎಂಸಿಯಿಂದ ಬಜಾರ ಮಾರ್ಗವಾಗಿ ಕುಂಭ ಮೇಳದೊಂದಿಗೆ ಸಂಚರಿಸಿದ ಜ್ಯೋತಿರಥ ಯಾತ್ರೆಯನ್ನು ಬೈಲಹೊಂಗಲ ತಾಲ್ಲೂಕಿಗೆ ಬೀಳ್ಕೊಡಲಾಯಿತು.
ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಶರಣ ಸಂಗಮ ಅಧ್ಯಕ್ಷ ಬಸವರಾಜ ಕಪ್ಪಣ್ಣವರ, ವಿರುಪಾಕ್ಷ ಮಾಮನಿ, ಎಂ.ಕೆ. ಬೇವೂರ, ಬಸವರಾಜ ಅರಮನಿ, ಚಂದ್ರು ಶಾಮರಾಯನವರ, ಜಿ.ವಾಯ್. ಕರಮಲ್ಲಪ್ಪನವರ, ಎಂ.ಎನ್. ಮಠದ, ಚಿನ್ನವ್ವ ಹುಚ್ಚನ್ನವರ, ಡಾ. ವೈ.ಎಂ. ಯಾಕೊಳ್ಳಿ, ಪ್ರಕಾಶ ಲಮಾಣಿ, ನೀಹಾ ತೊರಗಲ್ಲ ಹಾಗೂ ಪ್ರಮುಖರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.