ADVERTISEMENT

ಕೆಎಲ್‌ಇ ಆಯುಷ್ಮತಿ ಸ್ಪಾ, ವೆಲ್‌ನೆಸ್‌ ಕೇಂದ್ರ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 2:27 IST
Last Updated 14 ಡಿಸೆಂಬರ್ 2025, 2:27 IST
ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ಆರಂಭಿಸಿದ ಆಯುಷ್ಮತಿ ವಿಶೇಷ ಸ್ಪಾ ಹಾಗೂ ವೆಲ್‌ನೆಸ್‌ ಕೇಂದ್ರವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಶನಿವಾರ ಪರಿಶೀಲಿಸಿದರು  ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯಿಂದ ಆರಂಭಿಸಿದ ಆಯುಷ್ಮತಿ ವಿಶೇಷ ಸ್ಪಾ ಹಾಗೂ ವೆಲ್‌ನೆಸ್‌ ಕೇಂದ್ರವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಶನಿವಾರ ಪರಿಶೀಲಿಸಿದರು  ಪ್ರಜಾವಾಣಿ ಚಿತ್ರ   

ಪ್ರಜಾವಾಣಿ ವಾರ್ತೆ

ಬೆಳಗಾವಿ: ‘ಆಯುರ್ವೇದದ ಮಹತ್ವ ತಿಳಿಸಲು ಮತ್ತು ಆಯುರ್‌ ಚಿಕಿತ್ಸೆಯನ್ನು ಇನ್ನಷ್ಟು ಜನಾನುರಾಗಿ ಮಾಡುವ ಉದ್ದೇಶದಿಂದ ಕೆಎಲ್‌ಇ ಸಂಸ್ಥೆಯಿಂದ ಅತ್ಯಾಧುನಿಕ ಆಯುಷ್ಮತಿ ಚಿಕಿತ್ಸೆ, ವಿಶೇಷ ಸ್ಪಾ ಹಾಗೂ ವೆಲ್‌ನೆಸ್‌ ಕೇಂದ್ರವನ್ನು ಆರಂಭಿಸಿದೆ. ಡಿ.15ರಂದು ಇದರ ಉದ್ಘಾಟನೆ ನೆರವೇರಲಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ಇಲ್ಲಿನ ಬಿ.ಎಂ. ಕಂಕಣವಾಡಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಗ್ಲಿಷ್‌ ಔಷಧೋಪಚಾರಕ್ಕಿಂತಲೂ ಉತ್ತಮ ಚಿಕಿತ್ಸೆ ಆಯುರ್ವೇದದಲ್ಲಿ ಇದೆ. ಇದನ್ನು ಇನ್ನಷ್ಟು ಜನರ ಮಧ್ಯೆ ಒಯ್ಯಬೇಕಿದೆ.  ಆಯುಷ್ಮತಿ ಚಿಕಿತ್ಸೆ, ಸ್ಪಾ, ವೆಲ್‌ನೆಸ್‌ ಕೇಂದ್ರದ ಮೂಲಕ ನೈಸರ್ಗಿಕ ಪದ್ಧತಿಯ ಚಿಕಿತ್ಸಾ ವಿಧಾನ ಅನುಸರಿಸಲಾಗುತ್ತಿದೆ’ ಎಂದರು. 

ADVERTISEMENT

‘ಕಂಕಣವಾಡಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲೇ ಕೇರಳ ಶೈಲಿಯ ಹೊಸ ಕಟ್ಟಡ ನಿರ್ಮಿಸಲಾಗಿದೆ. ₹4.5 ಕೋಟಿ ವೆಚ್ಚ ಮಾಡಿದ್ದೇವೆ. 9,000 ಚದರ್‌ ಅಡಿ ವಿಸ್ತೀರ್ಣವಾಗಿದೆ’ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಕೆ. ಶೆಟ್ಟಿ ಮಾತನಾಡಿ, ‘ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಮೂರು ವಿಧದ ಚಿಕಿತ್ಸೆ ಇಲ್ಲಿ ಸಿಗುತ್ತದೆ’ ಎಂದರು.

‘ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೋಮವಾರ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಂಬೈನ ಕೇರಳ ಆಯುರ್ವೇದ ಕ್ಲಿನಿಕ್ ನಿರ್ದೇಶಕಿ ಡಾ.ದೇವಿಕಾ ದೇಶಮುಖ,  ಶಾಸಕ ಅಭಯ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.